ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಹೊರವಲಯದಲ್ಲಿರುವ ಪ್ರಸಿದ್ಧ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಆಗಸ್ಟ್ 1ರಿಂದ ಹೊಸ ಟಿಕೆಟ್ ದರಗಳ ಬಿಸಿ ತಟ್ಟಲಿದೆ. ಕಳೆದ ಐದು ವರ್ಷಗಳಿಂದ ಯಾವುದೇ ದರ ಹೆಚ್ಚಳವಾಗದ ಹಿನ್ನೆಲೆ, ಈಗ ಸರ್ಕಾರ ಶೇಕಡಾ 20ರಷ್ಟು ದರ ಹೆಚ್ಚಳಕ್ಕೆ ಅನುಮತಿ ನೀಡಿದೆ.
ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ನೀಡಿದ ಮಾಹಿತಿಯ ಪ್ರಕಾರ, ನೂತನ ದರಗಳು ಈ ರೀತಿ ಇರುತ್ತವೆ:
ವಯಸ್ಕ ಪ್ರವಾಸಿಗರಿಗೆ ಟಿಕೆಟ್ ದರ 100 ರಿಂದ 120ಕ್ಕೆ ಹೆಚ್ಚಳವಾಗಿದೆ.
ಮಕ್ಕಳಿಗೆ ಟಿಕೆಟ್ ದರ 50 ರಿಂದ 60ಕ್ಕೆ ಏರಿಕೆಯಾಗಿದೆ.
ಹಿರಿಯ ನಾಗರಿಕರಿಗೆ 60ರ ಟಿಕೆಟ್ ಈಗ 70 ಆಗಲಿದೆ.
ಸಫಾರಿ ಕಾಂಬೋ ಪ್ಯಾಕ್‌ಗಳೂ ದರ ಏರಿಕೆಗೆ ಒಳಗಾಗಿದ್ದು, ವಾರದ ದಿನಗಳಲ್ಲಿ 350 ಬದಲು 370 ಹಾಗೂ ವಾರಾಂತ್ಯದಲ್ಲಿ 400 ಬದಲು 420 ಎಂದು ನಿಗದಿಗೊಳಿಸಲಾಗಿದೆ.
ಪ್ರಾಣಿ ಆಹಾರ, ನಿರ್ವಹಣೆ, ಮತ್ತು ಸಿಬ್ಬಂದಿಯ ವೇತನದಲ್ಲಿ ಹೆಚ್ಚಳವಾದ ಕಾರಣದಿಂದಾಗಿ ದರ ಏರಿಕೆ ಅಗತ್ಯವಾಯಿತು. ಬನ್ನೇರುಘಟ್ಟ ಉದ್ಯಾನವನವು ಸ್ವಾಯತ್ತ ಸಂಸ್ಥೆಯಾಗಿದ್ದು, ಟಿಕೆಟ್ ಮಾರಾಟದಿಂದ ಸಿಗುವ ಆದಾಯವೇ ಇದರ ಆರ್ಥಿಕ ನೆಲೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಅದಕ್ಕಾಗಿ ಮೃಗಾಲಯ ಪ್ರಾಧಿಕಾರ ಶೇಕಡಾ 50ರಷ್ಟು ಟಿಕೆಟ್ ದರ ಏರಿಕೆ ಪ್ರಸ್ತಾವನೆ ನೀಡಿದರೂ, ಸರ್ಕಾರ ಶೇಕಡಾ 20ರಷ್ಟಕ್ಕೆ ಮಾತ್ರ ಒಪ್ಪಿಗೆ ನೀಡಿದ್ದು, ನೂತನ ದರಗಳು ಆಗಸ್ಟ್ 1ರಿಂದ ಜಾರಿಗೊಳ್ಳಲಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.