15 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ಮಾಡಿದ ಮೈಕ್ರೋಸಾಫ್ಟ್‌: ಇನ್ಮುಂದೆ ಕೆಲಸ ಬೇಕೇ AI ಜ್ಞಾನ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೇರಿಕನ್ ಟೆಕ್ ದೈತ್ಯ ಮೈಕ್ರೋಸಾಫ್ಟ್ ಈ ವರ್ಷ (2025) ಇಲ್ಲಿಯವರೆಗೆ 15,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.

ಮುಂದಿನ ವಜಾಗಳನ್ನು ತಪ್ಪಿಸಲು ಉದ್ಯೋಗಿಗಳಿಗೆ ಕಂಪನಿ ಮಾರ್ಗಸೂಚಿಗಳನ್ನು ನೀಡಿದೆ ಎಂದು ಹೊಸ ವರದಿಗಳು ತಿಳಿಸಿವೆ. ಉದ್ಯೋಗಿಗಳು AI ಕ್ಷೇತ್ರದಲ್ಲಿ ಪರಿಣತಿ ಹೊಂದಿರಬೇಕು, AI ಪರಿಣತಿಯನ್ನು ಇನ್ನು ಮುಂದೆ ಹೆಚ್ಚುವರಿ ಕೌಶಲ್ಯವೆಂದು ಪರಿಗಣಿಸುವುದಿಲ್ಲ. ಬದಲಿಗೆ ಕಡ್ಡಾಯವಾಗಿರಲಿದೆ. ಕಂಪನಿಯ ಯಾವುದೇ ಹಿರಿಯ ಹುದ್ದೆಯಲ್ಲಿದ್ದರೂ, ಎಷ್ಟೇ ಹಿರಿಯ ಉದ್ಯೋಗಿಯಾಗಿದ್ದರೂ ದೈನಂದಿನ ಕೆಲಸಗಳಲ್ಲಿ AI ಅನ್ನು ಪ್ರಾಯೋಗಿಕವಾಗಿ ಬಳಸಲು ತಿಳಿದಿರಬೇಕು ಎಂದು ಸೂಚನೆ ನೀಡಿದೆ .

ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಗಳ ಕೌಶಲ್ಯವನ್ನು ಅಳೆಯುವ ಪ್ರಮುಖ ಮಾನದಂಡಗಳಲ್ಲಿ AI ಕೂಡ ಒಂದಾಗಲಿದೆ. ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಅಳೆಯಲು AI ಬಳಕೆಯನ್ನು ನಿರ್ಣಾಯಕ ಅಂಶವಾಗಿ ಪರಿಗಣಿಸಲಾಗುವುದು ಎಂದು ಮೈಕ್ರೋಸಾಫ್ಟ್‌ನ ಡೆವಲಪರ್ ವಿಭಾಗದ ಮುಖ್ಯಸ್ಥೆ ಜೂಲಿಯಾ ಲೂಯಿಸನ್ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ.

ಈ ವರ್ಷ AI ಮೂಲಸೌಕರ್ಯವನ್ನು ನಿರ್ಮಿಸಲು ಮೈಕ್ರೋಸಾಫ್ಟ್ 80 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ. ಇದರಿಂದಾಗಿ ಇತರ ಕ್ಷೇತ್ರಗಳಲ್ಲಿ ಕಂಪನಿ ವೆಚ್ಚ ಕಡಿತ ಮಾಡುತ್ತಿರುವುದು ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತಿದೆ.

ಸುಮಾರು 9,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ವಜಾಗಳನ್ನು ಮೈಕ್ರೋಸಾಫ್ಟ್ ಇತ್ತೀಚೆಗೆ ಘೋಷಿಸಿದೆ. ಮೇ ತಿಂಗಳಿನಲ್ಲಿ 6,000 ಉದ್ಯೋಗಿಗಳನ್ನು ವಜಾಗೊಳಿಸಿದ್ದಕ್ಕೆ ಇದು ಹೆಚ್ಚುವರಿಯಾಗಿದೆ.

2024 ರ ಜೂನ್‌ನಲ್ಲಿ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಮೈಕ್ರೋಸಾಫ್ಟ್‌ನಲ್ಲಿ ಜಾಗತಿಕವಾಗಿ 228,000 ಉದ್ಯೋಗಿಗಳಿದ್ದಾರೆ. AI ಮೇಲೆ ಕೇಂದ್ರೀಕರಿಸುವ ಭಾಗವಾಗಿ ಗೂಗಲ್, ಮೆಟಾ, ಅಮೆಜಾನ್ ಸೇರಿದಂತೆ ಇತರ ಟೆಕ್ ದೈತ್ಯರು ಕೂಡ ಉದ್ಯೋಗಿಗಳನ್ನು ವಜಾಗೊಳಿಸುವ ಹಾದಿಯಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!