ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಮಾದಾಪುರಂ ದೇವಸ್ಥಾನದ ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ (27) ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದೆ.
ಪ್ರಕರಣವನ್ನು ಸರ್ಕಾರ ಸಿಬಿಐಗೆ ಹಸ್ತಾಂತರಿಸಿತ್ತು. ಈ ವೇಳೆ, ಮಧ್ಯ ಪ್ರವೇಶಿಸಿದ್ದ ನ್ಯಾಯಾಲಯ ಹೆಚ್ಚಿನ ತನಿಖೆಗೆ ಆದೇಶಿಸಿ, ಸಿಬಿಐಗೆ ತನಿಖಾಧಿಕಾರಿ ನೇಮಿಸುವಂತೆ ಸೂಚಿಸಿತ್ತು. ಇದೀಗ ಹಲ್ಲೆ ನಡೆಸಿದ್ದ ಪೊಲೀಸರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ನಿಕಿತಾ ಎಂಬ ಮಹಿಳೆ ನೀಡಿದ್ದ ಆಭರಣ ಕಳ್ಳತನದ ದೂರಿನ ಮೇರೆಗೆ ಅಜಿತ್ ಅವರನ್ನು ವಿಚಾರಣೆಗಾಗಿ ಪೊಲೀಸರು ಕರೆದುಕೊಂಡು ಹೋಗಿದ್ದರು. ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು. ಇದರಿಂದ ಅವರು ಸಾವನ್ನಪ್ಪಿದ್ದರು. ಅವರ ಮರಣೋತ್ತರ ಪರೀಕ್ಷೆಯಲ್ಲಿ 40 ಕ್ಕೂ ಹೆಚ್ಚು ಗಾಯಗಳು ಪತ್ತೆಯಾಗಿತ್ತು.
ನ್ಯಾಯಾಂಗ ತನಿಖಾ ವರದಿಯಲ್ಲೂ ಅಜಿತ್‌ಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ, ಇದು ಅಕ್ರಮ ಬಂಧನ ಮತ್ತು ಕಸ್ಟಡಿಯಲ್ಲಿ ನಡೆದ ಹಿಂಸಾಚಾರದ ಸ್ಪಷ್ಟ ಪ್ರಕರಣವಾಗಿದೆ ಎಂದು ಹೇಳಿತ್ತು. ಒಂದು ವಾರದೊಳಗೆ ತನ್ನ ತನಿಖಾ ತಂಡವನ್ನು ನೇಮಿಸಿ ಆಗಸ್ಟ್ 20 ರೊಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಿತ್ತು.