ಹೊಸದಿಗಂತ ಮಂಗಳೂರು:
ಅವಳದ್ದು ಅವಿರತ ಶ್ರಮ. ರಾತ್ರಿ ಹಗಲೆನ್ನದೆ ಶ್ರಮವಹಿಸಿ ಮಾಡಿದ ಆಕೆಯ ಕೆಲಸ ಸಂಸ್ಥೆಯನ್ನು ನಿಬ್ಬೆರಗುಗೊಳಿಸಿದೆ. ಕೇವಲ ಇಂಟರ್ನ್‌ಶಿಪ್ ಆಯ್ಕೆ ಬಯಸಿದ ಆಕೆ ಲಕ್ಷಾಂತರ ವೇತನಕ್ಕೆ ಉದ್ಯೋಗಿಯಾಗಿ ಆಯ್ಕೆಯಾಗಿದ್ದಾಳೆ. ಇದು ಮಂಗಳೂರಿನ ವಿದ್ಯಾರ್ಥಿನಿ ಕನ್ನಡ ಕುವರಿಯ ಸಾಧನೆಯ ಹಾದಿಯ ರೋಚಕ ಕಥೆ. ಸಾಧನೆಯ ಹಾದಿಯಲ್ಲಿರುವವರಿಗೆ ಈಕೆ ನಿಜಕ್ಕೂ ಮಾದರಿಯಾಗಿ ನಿಲ್ಲುತ್ತಾಳೆ.
ಹೆಸರು ರಿತುಪರ್ಣ ಕೆ.ಎಸ್. ಪ್ರಸಕ್ತ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಬೋಟಿಕ್ ಆಂಡ್ ಅಟೋಮೇಶನ್ ಕೋರ್ಸ್‌ನ ೬ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿ. ಈ ಎಳೆ ವಯಸ್ಸಿನಲ್ಲಿಯೇ ಆಕೆ ವಿಶ್ವದ ಗಮನಸೆಳೆದಿದ್ದಾಳೆ. ಅಮೆರಿಕದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ರೋಲ್ಸ್ ರೋಲ್ಸ್‌ರೋಯ್ಸ್ ಸಂಸ್ಥೆಯ ಜೆಟ್ ಇಂಜಿನ್ ವಿಭಾಗಕ್ಕೆ ಆಯ್ಕೆಯಾಗಿದ್ದು, ಕಂಪನಿಯಲ್ಲಿ ವಾರ್ಷಿಕ ೭೨.೩ ಲಕ್ಷ ರೂ.ಗಳ ವೇತನದ ಆಫರ್‌ರನ್ನು ತನ್ನದಾಗಿಸಿಕೊಂಡಿದ್ದಾಳೆ. ಜೊತೆಗೆ ಸಂಸ್ಥೆಯ ಅತ್ಯಂತ ಕಿರಿಯ ಉದ್ಯೋಗಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.
ಜನವರಿಯಿಂದಲೇ ಕೆಲಸ ಶುರು…
2025ರ ಜನವರಿ 2ರಿಂದ ಕೆಲಸ ಮಾಡಲು ನಿರ್ದೇಶನ ನೀಡುತ್ತದೆ. ಮಧ್ಯರಾತ್ರಿ 12ರಿಂದ ಬೆಳಗ್ಗೆ 6ರವರೆಗೆ ಕಂಪನಿಗೆ ಒಂದು ವರ್ಷ ಮನೆಯಿಂದಲೇ ಕೆಲಸ ಮಾಡಬೇಕು. ಇಂಜಿನಿಯರಿಂಗ್‌ನ 7ನೆ ಸೆಮ್ ಮುಗಿದ ತಕ್ಷಣ ಅಮೆರಿಕದ ಟೆಕ್ಸಾಸ್‌ನಲ್ಲಿ ಕಂಪನಿಗೆ ಸೇರಿಕೊಳ್ಳಲು ಒಪ್ಪಂದವಾಗುತ್ತದೆ. ಈ ಮೂಲಕ ಜನವರಿ 2ರಿಂದ ತರಬೇತಿ ಜತೆಗೆ ಕಂಪನಿ ಕೆಲಸವನ್ನು ಸರಿದೂಗಿಸಿಕೊಂಡು ಸಾಗುತ್ತಿ ರುವ ರಿತುಪರ್ಣಗೆ ಏಪ್ರಿಲ್‌ನಲ್ಲಿ ಬಂದ ಕಂಪನಿಯಿಂದ ಇನ್ನೊಂದು ಸಂದೇಶ ಬರುತ್ತದೆ. ಅದರಂತೆ ನಿಮ್ಮ ಕೆಲಸ ಮತ್ತು ಏಕಾಗ್ರತೆಯನ್ನು ಮೆಚ್ಚಿ ಕಂಪನಿ ನಿಮಗೆ ವಾರ್ಷಿಕವಾಗಿ ನಿಗದಿಪಡಿಸಿದ್ದ ವೇತನ 39.58 ಲಕ್ಷ ರೂ.ನಿಂದ 72.3 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂಬುದು ಆ ಸಂದೇಶವಾಗಿತ್ತು’ ಎಂದು ತನ್ನ ಮಗಳ ಕಠಿಣ ಪರಿಶ್ರಮದ ಬಗ್ಗೆ ಸರೇಶ್ ವಿವರ ನೀಡಿದ್ದಾರೆ.
ಸಾಧನೆ ಹಿಂದಿನ ಕಥೆ
ರಿತುಪರ್ಣರ ರೋಲ್ಸ್‌ರೋಯ್ಸ್ ಕಂಪನಿ ಜತೆಗಿನ 8 ತಿಂಗಳ ಪಯಣ, ಆಕೆಯ ಸಾಧನೆಯ ಯಶೋಗಾಥೆ, ಓದು ಇವೆಲ್ಲದರ ಕುರಿತಂತೆ ತಂದೆ ಸರೇಶ್ ಮಾಹಿತಿ ಹಂಚಿಕೊಂಡಿದ್ದಾರೆ.
‘ಇಂಜಿನಿಯರಿಂಗ್ ಕಲಿಕೆಯ ವೇಳೆ ಇಂಟರ್ನ್‌ಶಿಪ್ ಮಾಡುವ ಇರಾದೆಯಿಂದ ರಿತುಪರ್ಣ ವಿಶ್ವದ ೧೦ ಮಹಾನ್ ಕಂಪನಿಗಳಲ್ಲಿ ಒಂದಾದ ರೋಲ್ಸ್ ರೋಯ್ಸ್ ಕಂಪನಿಯ ಮೊರೆ ಹೋಗುತ್ತಾರೆ. ಈ ಕುರಿತಂತೆ ಇಮೇಲ್ ಸಂದೇಶವನ್ನೂ ಕಳುಹಿಸು ತ್ತಾರೆ. ಆದರೆ ಕಂಪೆನಿ ವಿದ್ಯಾರ್ಥಿನಿಯ ಇಮೇ ಲ್‌ನ್ನು ಅಷ್ಟು ಗಂಭೀರವಾಗಿ ಪರಿಗಣಿಸದೆ ‘ಈ ಕಂಪನಿ ಬಗ್ಗೆ ನಿಮಗೆಷ್ಟು ಗೊತ್ತು? ನಮ್ಮ ಕಾರ್ಯವೈಖರಿ, ಟಾಸ್ಕ್‌ಗಳ ಬಗ್ಗೆ ಏನು ಗೊತ್ತು ಎಂದು ಪ್ರಶ್ನಿಸುತ್ತದೆಯಂತೆ. ಏನೇ ಟಾಸ್ಕ್ ನೀಡಿದರೂ ಪೂರೈಸಬಲ್ಲೆ ಎಂಬ ಉತ್ತರ ರಿತುಪರ್ಣರ ಇಮೇಲ್‌ನಿಂದ ರವಾನೆಯಾಗುತ್ತದೆ. ಕಂಪೆನಿ ಕೂಡ ನೋಡೇ ಬಿಡೋಣ ಎಂದು ಒಂದು ಕ್ಲಿಷ್ಟಕರ ಟಾಸ್ಕ್ ನೀಡುತ್ತದೆ. ಜೊತೆಗೆ ಒಂದು ತಿಂಗಳಾದರೂ ಇದನ್ನು ಮುಗಿಸುವುದು ಕಷ್ಟ ಎಂಬುದನ್ನೂ ಉಲ್ಲೇಖಿಸುತ್ತದೆ. ಆದರೆ ಛಲಬಿಡದೆ ಇದರ ಹಿಂದೆ ಬಿದ್ದ ರಿತುಪರ್ಣ ರಾತ್ರಿ ಹಗಲೆನ್ನದೆ ಕಂಪ್ಯೂಟರ್ ಮುಂದೆ ಕುಳಿತು ಆ ಟಾಸ್ಕ್‌ನ್ನು ವಾರದೊಳಗೆ ಪೂರೈಸಿ ಕಳುಹಿಸಿತ್ತಾರೆ. ಇದರಿಂದ ಆಶ್ಚರ್ಯಗೊಂಡ ಕಂಪೆನಿ ನಿರಂತರ ಕ್ಲಿಷ್ಟಕರವಾದ ಟಾಸ್ಕ್ ನೀಡುತ್ತದೆ. ಈ ಟಾಸ್ಕ್‌ಗಳು ನಿರಂತರ ಎಂಟು ತಿಂಗಳ ಕಾಲ ನಡೆಯುತ್ತದೆ. ಎಲ್ಲದರಲ್ಲೂ ರಿತುಪರ್ಣ ಸೈ ಎನಿಸಿಕೊಳ್ಳುತ್ತಾಳೆ. ಈಕೆಯ ಬುದ್ಧಿಮತ್ತೆ ಮೆಚ್ಚಿದ ಕಂಪೆನಿ ಕೊನೆಗೆ ಉದ್ಯೋಗದ ಆಫರನ್ನೇ ನೀಡಿಬಿಡುತ್ತದೆ. ಇಂಟರ್ನ್‌ಶಿಪ್ ಬಯಸಿದ ರಿತುಪರ್ಣರ ಶ್ರಮ ಆಕೆಯನ್ನು ಉದ್ಯೋಗದ ಹಾದಿಯಲ್ಲಿ ನಿಲ್ಲಿಸಿದೆ ಎಂದು ಸರೇಶ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಹೆಮ್ಮೆ ಎನಿಸಿದೆ
ತುಂಬಾನೆ ಖುಷಿಯಾಗಿದೆ.ಇಂಜನಿಯರಿಂಗ್ ಶಿಕ್ಷಣದ ಪ್ರಥಮ ವರ್ಷದಿಂದಲೇ ವಿವಿಧ ಕಾರು ಕಂಪನಿಗಳ ವೆಬ್‌ಸೈಟ್‌ಗಳನ್ನು ನೋಡುತ್ತಾ ಬಂದಿದ್ದೆ. ಪ್ರಥಮ ವರ್ಷದಿಂದಲೇ ಅದಕ್ಕೆ ಅಗತ್ಯ ವಾದ ಸ್ಕಿಲ್‌ಸೈಟ್, ಯೂಟ್ಯೂಬ್‌ಗಳನ್ನು ನೋಡಿ ಕೊಂಡಿದ್ದೆ. ಸದ್ಯ ನನಗೆ ರೋಲ್ಸ್ ರೋಯ್ಸ್‌ನ ವಿಮಾನದ ಇಂಜಿನ್ ತಯಾರಿಸುವ ವಿಭಾಗದಲ್ಲಿ ಉದ್ಯೋಗ ದೊರಕಿದೆ. ತುಂಬಾನೆ ಹೆಮ್ಮೆಯಾಗಿದೆ ಎಂದು ರಿತುಪರ್ಣ ಕೆ.ಎಸ್. ಹೇಳಿಕೊಳ್ಳುತ್ತಾರೆ.