ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಮಿಕಲ್ ಕಂಪನಿಯಲ್ಲಿ ಹೈಡ್ರೋಕ್ಲೋರಿಕ್ ಆ್ಯಸಿಡ್ ಹೊಂದಿದ್ದ ಪೈಪ್ ಸ್ಪೋಟಗೊಂಡು ಕಾರ್ಮಿಕರೊಬ್ಬರ ಕಣ್ಣುಗಳಿಗೆ ಗಂಭೀರ ಗಾಯಗಳಾಗಿದ್ದ ಘಟನೆ ಸಂಭವಿಸಿದ 24 ಗಂಟೆಗಳಲ್ಲೇ ಇದೇ ಪ್ರದೇಶದ ಮತ್ತೊಂದು ಕಾರ್ಖಾನೆಯಲ್ಲಿ ಮತ್ತೊಂದು ಭೀಕರ ಘಟನೆ ಸಂಭವಿಸಿದ್ದು ಆತಂಕ ಮೂಡಿಸಿದೆ.
ಶನಿವಾರ, ಇಲ್ಲಿಯ ಫಾರ್ಮಾ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಬಿಸ್ವಜೀತ್ ಬೇರ್ (35) ಎಂಬವರಿಗೆ ಅಪಾಯಕಾರಿ ರಾಸಾಯನಿಕ ತಗುಲಿ ಎರಡು ಕೈಗಳಿಗೆ ಗಂಭೀರ ಗಾಯಗಳಾಗಿವೆ. ಅವರು ಸೈದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದು, ಎರಡು ಕೈಗಳು ಸುಟ್ಟು ಹೋಗಿರುವುದು ವೈದ್ಯಕೀಯ ವರದಿಯಲ್ಲಿ ಸ್ಪಷ್ಟವಾಗಿದೆ.
ಘಟನೆಯ ಕುರಿತು ಮಾಧ್ಯಮಗಳೆದುರು ಹೆಚ್ಚಿನ ಮಾಹಿತಿ ನೀಡಲೆತ್ನಿಸಿದ ಆತನನ್ನು ಕಂಪನಿಯ ಕಡೆಯವರು ಎನ್ನಲಾದ ಕೆಲವರು ಬಂದು, ಯಾರಿಗೂ, ಯಾವುದನ್ನೂ ಹೇಳದಂತೆ ಕಟ್ಟಪ್ಪಣೆ ಹೊರಡಿಸಿ, ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಕಂಪನಿಯ ಈ ನಡವಳಿಕೆಯಿಂದ ಶಂಕೆ ಹುಟ್ಟಿಸಿದೆ. ಅಲ್ಲದೆ, ಅವರ ಆಧಾರ್ ಕಾರ್ಡ್ ಕೂಡಾ ಕಾರ್ಮಿಕನ ಬಳಿ ಇರದೆ, ಕಂಪನಿಯವರ ಕೈಯಲ್ಲಿರುವುದಾಗಿ ತಿಳಿದು ಬಂದಿದೆ. ಇದರಿಂದ ಕಾರ್ಮಿಕರ ಮೂಲವಿವರಗಳನ್ನೂ ಮರೆಮಾಚುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ಕಳುಹಿಸಬೇಕೆಂದು ಸಲಹೆ ನೀಡಿದರೂ, ಕಂಪನಿಯ ಕೆಲವರು ಬಂದು ಅವರನ್ನು ಅಲ್ಲಿಂದ ಕರೆದೊಯ್ದಿದ್ದಾರೆ. ಈ ಕುರಿತು ಪ್ರಶ್ನಿಸಿದಾಗ, ಕಂಪನಿಯವರು ‘ಆಧಾರ್ ಕಾರ್ಡ್ ತೋರಿಸಬೇಡಿ, ಯಾವುದಕ್ಕೂ ಮಾತಾಡಬೇಡಿ’ ಎಂದು ಸೂಚನೆ ನೀಡಿದ್ದಾರೆ ಎಂದು ಬಿಸ್ವಜೀತ್ ಅವರ ದೂರಿನಲ್ಲಿ ತಿಳಿದುಬಂದಿದೆ.
ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಸಾಯನಿಕ ಕಾರ್ಖಾನೆಗಳಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮುಂತಾದ ರಾಜ್ಯಗಳ ಕಾರ್ಮಿಕರಾಗಿದ್ದು, ಅವರಿಗೆ ಯಾವುದೇ ರೀತಿಯ ಸುರಕ್ಷಾ ವ್ಯವಸ್ಥೆ ಇಲ್ಲದಿರುವುದು ನಿಯಮಿತ ಅವಘಡಗಳಿಗೆ ದಾರಿ ಮಾಡಿಕೊಡುತ್ತಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ಹಲವು ಬಾರಿ ದೂರುಗಳನ್ನು ಪಡೆದಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶವಾಗಿದೆ.