ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಭಾಷೆ ಸಂಭಾಷಣೆಗೆ ಉಪಯುಕ್ತ ಎಂಬ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿಕೆಗೆ ಹಿರಿಯ ನಟ ಪ್ರಕಾಶ್ ರಾಜ್ ತೀವ್ರ ಪ್ರತಿಕ್ರಿಯೆ ನೀಡಿದ್ದು, ಅವರಿಬ್ಬರ ನಡುವಿನ ಟ್ವೀಟ್ ವಾರ್ ಮತ್ತೆ ಶುರುವಾಗಿದೆ.
ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪವನ್ ಕಲ್ಯಾಣ್, “ಭಾರತದ ವಿಭಿನ್ನ ಭಾಗಗಳು ಸಂಪರ್ಕ ಹೊಂದಲು ಹಿಂದಿ ಪ್ರಮುಖವಾಗಿದೆ. ಉತ್ತಮ ಸಂವಹನಕ್ಕಾಗಿ ದಕ್ಷಿಣದ ಜನರೂ ಹಿಂದಿ ಕಲಿಯಬೇಕು” ಎಂದು ಹೇಳಿದರು. ಅವರು, “ತೆಲುಗು ನಮಗೆ ತಾಯಿಯಂತೆ, ಹಿಂದಿ ಅಜ್ಜಿಯಂತೆ. ಇದು ದೇಶದ ಒಗ್ಗಟ್ಟಿಗೆ ಸಹಕಾರ ನೀಡುತ್ತದೆ,” ಎಂಬ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪ್ರಕಾಶ್ ರಾಜ್ ಕಿಡಿಕಾರಿದ ಟ್ವೀಟ್
ಪವನ್ ಕಲ್ಯಾಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ಅವರ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡು, “ನೀವು ನಿಮ್ಮನ್ನು ಎಷ್ಟು ಬೆಲೆಗೆ ಮಾರಿಕೊಂಡಿದ್ದೀರಿ? ನಾಚಿಕೆಗೇಡಿನ ಸಂಗತಿ” ಎಂದು ಬರೆದು ಕಿಡಿಕಾರಿದ್ದಾರೆ. ಈ ವಾಕ್ಯದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯ ಹಾಗೂ ಚರ್ಚೆಗಳು ಗರಿಗೆದರಿವೆ.
ಕೆಲವು ತಿಂಗಳಿಂದ ಪ್ರಕಾಶ್ ರಾಜ್ ಹಾಗೂ ಪವನ್ ಕಲ್ಯಾಣ್ ನಡುವಿನ ಮುಸುಕಿನ ಗುದ್ದಾಟ ಜೋರಾಗಿದೆ. ಮೇ 2025ರಲ್ಲಿ ಪವನ್ ಕಲ್ಯಾಣ್ ತಮಿಳುನಾಡು ನಾಯಕರ ಹಿಂದಿ ವಿರೋಧವನ್ನು ಪ್ರಶ್ನಿಸಿದ್ದ ವೇಳೆ, ಪ್ರಕಾಶ್ ರಾಜ್ ತಮ್ಮ ಟ್ವೀಟ್‌ನಲ್ಲಿ, “ಪವನ್ ಕಲ್ಯಾಣ್ ಹಿಂದಿಯನ್ನು ಹೇರಬಾರದು. ಇದು ನಮ್ಮ ಸಂಸ್ಕೃತಿಯ ವಿಷಯ, ನಾವು ಸ್ವಾಭಿಮಾನ ಕಾಯಬೇಕು” ಎಂದು ಪ್ರತಿಕ್ರಿಯಿಸಿದ್ದರು.
ಇದೇ ಸಮಯದಲ್ಲಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಹಿಂದಿ ಭಾಷೆ ಹೇರಿಕೆಗೆ ವಿರುದ್ಧ ಪ್ರತಿಭಟನೆಯ ವಾತಾವರಣವಿರುವ ಬೆನ್ನಲ್ಲೇ, ಈ ಹೊಸ ಘರ್ಷಣೆಯು ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.