ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡಿನ ಪ್ರವಾಸೋದ್ಯಮ ಹಳ್ಳಿ ಮತ್ತಷ್ಟು ಬೆಳಕಿಗೆ ಬರಲು ಸಿದ್ಧವಾಗಿದ್ದು, ಶರಾವತಿ ನದಿಯ ಹಿನ್ನೀರಿನಲ್ಲಿ ನಿರ್ಮಾಣಗೊಂಡಿರುವ ಐತಿಹಾಸಿಕ ಸಿಗಂದೂರು ಸೇತುವೆಯನ್ನು ನಾಳೆ (ಜುಲೈ 14) ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆಗೊಳಿಸಲಿದ್ದಾರೆ. ದೇಶದಲ್ಲೇ ಎರಡನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆಯಾಗಿ ಖ್ಯಾತಿ ಪಡೆದ ಈ ಯೋಜನೆ, ಶಿವಮೊಗ್ಗ ಜಿಲ್ಲೆಯ ಜನತೆಗೆ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಆಯಾಮ ತೆರೆದಿರುವುದು ಖಚಿತ.
ಶರಾವತಿ ನದಿಯ ಈ ಭಾಗದಲ್ಲಿ ಕರೂರು-ಬಾರಂಗಿ ಹೋಬಳಿಯ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತೆ ಹಲವು ದಶಕಗಳಿಂದ ನಿರೀಕ್ಷಿಸುತ್ತಿದ್ದ ಈ ಸೇತುವೆ, ಕೊಲ್ಲೂರು ಹಾಗೂ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಸಂಪರ್ಕಕ್ಕೆ ದಾರಿ ಕಲ್ಪಿಸಲಿದೆ. ಈವರೆಗೆ ಲಾಂಚ್ ಸೌಲಭ್ಯದಮೇಲೆ ಅವಲಂಬಿತವಾಗಿದ್ದ ಸ್ಥಳೀಯರಿಗೆ ಇದು ಸುಲಭ ಸಂಚಾರದ ಹೆಜ್ಜೆಯಾಗಿದೆ.
2019ರಲ್ಲಿ ಆರಂಭಗೊಂಡಿದ್ದ ಈ ಕೇಬಲ್ ಆಧಾರಿತ ಸೇತುವೆ ನಿರ್ಮಾಣ ಕಾರ್ಯಕ್ಕೆ 450 ಕೋಟಿ ರೂ. ವೆಚ್ಚವಾಗಿದ್ದು, 2020ರ ಡಿಸೆಂಬರ್ನಲ್ಲಿ ಕಾಮಗಾರಿಗೆ ನಾಂದಿ ಹಾಡಲಾಗಿತ್ತು. ಈಗ ಎಲ್ಲಾ ಹಂತದ ಕೆಲಸಗಳು ಪೂರ್ಣಗೊಂಡಿದ್ದು, ನಾಳೆ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಸೇತುವೆ ಅಧಿಕೃತವಾಗಿ ಸಾರ್ವಜನಿಕ ಉಪಯೋಗಕ್ಕೆ ತೆರೆದುಕೊಳ್ಳಲಿದೆ.
ಈ ಸೇತುವೆಯ ಉದ್ದವು ಸುಮಾರು 2.24 ಕಿಲೋಮೀಟರ್ ಆಗಿದ್ದು, ಅಗಲವು 16 ಮೀಟರ್ ಆಗಿದೆ. ಅದರಲ್ಲೂ 740 ಮೀಟರ್ ನಷ್ಟು ಭಾಗವು ಕೇಬಲ್ನ ಆಧಾರದ ಮೇಲೆ ನಿಂತಿದ್ದು, ಇದು ತಾಂತ್ರಿಕವಾಗಿ ಅತ್ಯಂತ ಉನ್ನತ ಗುಣಮಟ್ಟದ ನಿರ್ಮಾಣವಾಗಿದೆ.