ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ಬೆನ್ನಲ್ಲೇ ಅಗ್ರಿಗೇಟರ್ ಕಂಪನಿಗಳು ಮತ್ತು ಆಟೋ ಚಾಲಕರು ಪ್ರಯಾಣಿಕರ ಬಳಿ ದುಪ್ಪಟ್ಟು ದರ ವಸೂಲಿಗೆ ಮುಂದಾಗಿದ್ದರು.
ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಿದ್ದ ಅಗ್ರಿಗೇಟರ್ ಕಂಪನಿಗಳು ಕೂಡ ಹಗಲು ದರೋಡೆಗೆ ಇಳಿದಿದ್ದವು. ಇದರ ವಿರುದ್ದ ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಬಳಿಕ ಸಾರಿಗೆ ಇಲಾಖೆ ಎಚ್ಚೆತ್ತು, ದುಪ್ಪಟ್ಟು ದರ ವಸೂಲಿಗೆ ಕಡಿವಾಣ ಹಾಕಲು ಮುಂದಾಗಿದೆ.
ಕಳೆದ ಒಂದು ವಾರದಿಂದ ನಗರದ 11 ಆರ್ಟಿಒ ಕಚೇರಿ ವ್ಯಾಪ್ತಿಯಲ್ಲಿ 20 ತಂಡಗಳನ್ನು ರಚಿಸಿ ಸಾರಿಗೆ ಅಧಿಕಾರಿಗಳು ನಗರದಾದ್ಯಂತ ಕಾರ್ಯಚರಣೆ ಕೈಗೊಂಡಿದ್ದಾರೆ. ಈ ವೇಳೆ ಒಟ್ಟು 3531 ಆಟೋಗಳ ತಪಾಸಣೆ ನಡೆಸಿದ್ದು, ಅದರಲ್ಲಿ ಪರ್ಮೀಟ್ ಇಲ್ಲದಿರುವುದು, ದುಪ್ಪಟ್ಟು ದರ ವಸೂಲಿ, ಇನ್ಸೂರೆನ್ಸ್, ಡಾಕ್ಯುಮೆಂಟ್ಗಳಿಲ್ಲದ 1006 ವಾಹನಗಳ ವಿರುದ್ದ ಕೇಸ್ ದಾಖಲಿಸಿ, 233 ಆಟೋಗಳನ್ನು ಸೀಜ್ ಮಾಡಿದ್ದಾರೆ. ಆದರೂ ಅಗ್ರಿಗೇಟರ್ ಕಂಪನಿಗಳು ಮತ್ತು ಕೆಲ ಆಟೋ ಚಾಲಕರು ಇನ್ನೂ ದುಪ್ಪಟ್ಟು ವಸೂಲಿ ಮಾಡೋದನ್ನು ನಿಲ್ಲಿಸಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.