ಭಾರತೀಯ ಅಡುಗೆ ಮನೆಯ ಮಸಾಲೆ ಬಾಕ್ಸ್ನಲ್ಲಿ ಲವಂಗಕ್ಕೆ ಪ್ರಮುಖ ಸ್ಥಾನವಿದೆ. ಧೂಪದಂತೆ ಸುಗಂಧ ಬೀರುತ್ತಾ, ಔಷಧೀಯ ಗುಣಗಳಿಂದ ಕೂಡಿರುವ ಈ ಸಣ್ಣ ಮಸಾಲೆ, ಆಯುರ್ವೇದದಿಂದ ಇಂದಿನ ವೈಜ್ಞಾನಿಕ ಅಧ್ಯಯನಗಳವರೆಗೆ ಎಲ್ಲರನ್ನೂ ಬೆರಗಾಗುವಂತೆ ಮಾಡಿದೆ. ಲವಂಗವು ಕೇವಲ ರುಚಿಗಾಗಿ ಬಳಸುವ ಪದಾರ್ಥವಲ್ಲ, ಅದು ಆರೋಗ್ಯವನ್ನು ಸಂರಕ್ಷಿಸುವ ನೈಸರ್ಗಿಕ ಶಕ್ತಿಯುಳ್ಳ ಮಸಾಲೆಯು ಹೌದು. ತಜ್ಞರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಅಗೆಯುವುದರಿಂದ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳಾಗುತ್ತವೆ.
ಯಕೃತ್ತಿನ ಆರೋಗ್ಯ ಸುಧಾರಣೆ
ಅಧ್ಯಯನಗಳ ಪ್ರಕಾರ ಲವಂಗದಲ್ಲಿ ಇರುವ ಯುಜೆನಾಲ್ ಮತ್ತು ಅದರ ಸಾರವು ಯಕೃತ್ತಿನ ಮೇಲೆ ಉಂಟಾಗುವ ವಿಷಕಾರಿ ಪರಿಣಾಮಗಳನ್ನು ಕಡಿಮೆ ಮಾಡುತ್ತವೆ. ಖಾಸಗಿ ಅಧ್ಯಯನಗಳಲ್ಲಿ ಲವಂಗದಿಂದ ಥಿಯೋಅಸೆಟಮೈಡ್ ನಂತಹ ದೇಹಕ್ಕೆ ಹಾನಿಕಾರಕ ರಾಸಾಯನಿಕಗಳಿಂದ ರಕ್ಷಣೆ ಸಿಗುವುದಾಗಿ ಹೇಳಲಾಗಿದೆ. ಇದರಿಂದ ಲಿವರ್ ಸುರಕ್ಷಿತವಾಗುವುದು ಮಾತ್ರವಲ್ಲ, ಅದರ ಕಾರ್ಯಕ್ಷಮತೆ ಕೂಡ ಉತ್ತಮಗೊಳ್ಳುತ್ತದೆ.
ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ
ಲವಂಗದಲ್ಲಿ ಯುಜೆನಾಲ್ನ ಜೊತೆಗೆ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ನಿರೋಧಕ ಗುಣಗಳೂ ಹೇರಳವಾಗಿವೆ. ಈ ಸಕ್ರಿಯ ಘಟಕಗಳು ದೇಹದ ಬಿಳಿ ರಕ್ತಕಣಗಳ ಉತ್ಪತ್ತಿಯನ್ನು ಉತ್ತೇಜಿಸುತ್ತವೆ. ಇದರಿಂದ ಸೋಂಕುಗಳು, ಜ್ವರ ಮತ್ತು ಬೇರೆ ಆಂತರಿಕ ತೊಂದರೆಗಳಿಂದ ದೇಹವನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಕೋವಿಡ್ ನಂತರದ ಕಾಲಘಟ್ಟದಲ್ಲಿ ಇಮ್ಮ್ಯೂನಿಟಿ ಬೂಸ್ಟರ್ ಆಗಿ ಲವಂಗ ಉಪಯುಕ್ತ ಎನ್ನಲಾಗಿದೆ.
ಸಕ್ಕರೆ ಮಟ್ಟ ನಿಯಂತ್ರಣ
ಡಯಬೆಟಿಸ್ ಸಮಸ್ಯೆ ಎದುರಿಸುತ್ತಿರುವವರಿಗೆ ಲವಂಗ ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಲವಂಗದಲ್ಲಿ ಇರುವ ನೈಗ್ರಿಸಿನ್ ಎಂಬ ಸಂಯುಕ್ತವು ದೇಹದ ಜೀವಕೋಶಗಳಿಗೆ ಗ್ಲೂಕೋಸ್ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತದೆ. ಅಧ್ಯಯನಗಳಲ್ಲಿ ಪ್ರೀಡಯಬೆಟಿಕ್ ವ್ಯಕ್ತಿಗಳಲ್ಲಿ ಇದರ ಪರಿಣಾಮ ಸ್ಪಷ್ಟವಾಗಿ ಕಂಡುಬಂದಿದೆ.
ಜೀರ್ಣಕ್ರಿಯೆ ಸುಧಾರಣೆ
ಅನಿಲ, ಅಜೀರ್ಣ, ಗ್ಯಾಸ್ಟ್ರಿಕ್ ಇತ್ಯಾದಿ ಸಮಸ್ಯೆಗಳಿಂದ ಬಳಲುವವರಿಗೆ ಲವಂಗ ಒಂದು ನೈಸರ್ಗಿಕ ಪರಿಹಾರ. ಲವಂಗದ ಕಾರ್ಮಿನೇಟಿವ್ ಗುಣಲಕ್ಷಣಗಳು ಜೀರ್ಣಕ್ರೀಯೆಯನ್ನು ಉತ್ತೇಜಿಸುತ್ತವೆ. ಹಸಿವನ್ನು ಹೆಚ್ಚಿಸಿ ಆಹಾರ ಸರಿಯಾಗಿ ಜೀರ್ಣವಾಗಲು ಸಹಾಯ ಮಾಡುತ್ತವೆ. ಪೆಪ್ಟಿಕ್ ಅಲ್ಸರ್ ಅಥವಾ ಹಲ್ಲು ನೋವಿಗೆ ಲವಂಗ ಎಣ್ಣೆ ಪ್ರಯೋಜನಕಾರಿಯಾಗಿದೆ.
ಮೂಳೆಗಳ ಬಲವರ್ಧನೆ
ಲವಂಗದಲ್ಲಿ ಮ್ಯಾಂಗನೀಸ್ನ ಪ್ರಮಾಣ ಅತ್ಯಧಿಕವಾಗಿದೆ. ಇದು ಮೂಳೆಗಳ ಗಟ್ಟಿತನ, ಸ್ಥಿರತೆ ಹಾಗೂ ಬೆಳವಣಿಗೆಗೆ ಸಹಾಯಕ. ಯುಜೆನಾಲ್ ಕೂಡ ಮೂಳೆ ದ್ರವ್ಯರಾಶಿ ನಷ್ಟವನ್ನು ತಡೆಹಿಡಿಯುವಲ್ಲಿ ಸಹಕಾರಿಯಾಗಿದೆ. ಇದು ಆಸ್ಟಿಯೋಪೊರೋಸಿಸ್ ತಡೆಗಟ್ಟುವ ನೈಸರ್ಗಿಕ ಮಾರ್ಗವನ್ನೂ ಒದಗಿಸುತ್ತದೆ.
ಒಂದು ಸಣ್ಣ ಲವಂಗದೊಳಗೆ ಇಷ್ಟೊಂದು ಆರೋಗ್ಯದ ಶಕ್ತಿ ಅಡಗಿದೆ ಎಂಬುದೇ ಆಶ್ಚರ್ಯ. ದಿನವಿಡೀ ಚುಟುಕು ತೊಂದರೆಗಳಿಂದ ಹಿಡಿದು ದೀರ್ಘಕಾಲದ ಕಾಯಿಲೆಗಳವರೆಗೆ, ಲವಂಗವು ನಿಸ್ಸಂದೇಹವಾಗಿ ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ. ಆದರೆ, ಯಾವುದಕ್ಕೂ ಮಿತಿ ಮುಖ್ಯ – ನಿಯಮಿತ ಪ್ರಮಾಣದಲ್ಲಿ ಮಾತ್ರ ಬಳಸುವುದು ಉತ್ತಮ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)