ತಮಿಳುನಾಡು ಪ್ರವಾಸ ಎಂದಾಗ ಬಹುಪಾಲು ಮಂದಿ ತಕ್ಷಣ ಊಟಿ ಅಥವಾ ಕೊಡೈಕ್ನಾಲ್ ಹೆಸರನ್ನೇ ನೆನಪಿಸಿಕೊಳ್ಳುತ್ತಾರೆ. ಆದರೆ ಈ ಜನಪ್ರಿಯ ಗಿರಿಧಾಮಗಳ ಹೊರತಾಗಿಯೂ ತಮಿಳುನಾಡಿನಲ್ಲಿ ಇನ್ನೂ ಅನೇಕ ಶಾಂತ, ದೃಶ್ಯ ವೈಭವವಿರುವ ಹಳ್ಳಿ ಪ್ರವಾಸಿ ತಾಣಗಳಿವೆ.
ಯೆರ್ಕಾಡ್
ಶೆವರಾಯ್ ಬೆಟ್ಟಗಳಲ್ಲಿ ಸೆರೆಯಾದ ಪ್ರಕೃತಿ ಸೌಂದರ್ಯದ ನೋಟ ನೀಡುವ ಯೆರ್ಕಾಡ್, ಕಾಫಿ ತೋಟ, ಕಿತ್ತಳೆ ತೋಟಗಳಿಂದ ಕೂಡಿದ ಗಿರಿಧಾಮ. ಇಲ್ಲಿ ಜನಸಂದಣಿ ಕಡಿಮೆ, ತಂಪು ಹವಾಮಾನ, ಸುಂದರ ಸರೋವರದ ನೋಟಗಳು ನಿಮಗೆ ನೆಮ್ಮದಿ ತರಲಿದೆ. ಬಜೆಟ್ ಫ್ರೆಂಡ್ಲಿ ಟ್ರಿಪ್ ಮಾಡಲು ಯೋಗ್ಯ ತಾಣ.
ವಾಲ್ಪರೈ
ಅಣ್ಣಾಮಲೈ ಬೆಟ್ಟಗಳಲ್ಲಿ ಅಡಗಿರುವ ಈ ಗಿರಿಧಾಮವು ಪರಿಸರ ಪ್ರೇಮಿಗಳಿಗೆ ಅದ್ಭುತ ತಾಣ. ದಟ್ಟ ಕಾಡು, ಜಲಪಾತ, ಚಹಾ ತೋಟಗಳಿಂದ ಆವೃತವಾಗಿರುವ ವಾಲ್ಪರೈನಲ್ಲಿ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಬಹುದು. ಆದರೆ ಇಲ್ಲಿ ಕಾಡಾನೆಗಳ ಹಾವಳಿ ಹೆಚ್ಚು ಇದ್ದ ಕಾರಣ ಎಚ್ಚರಿಕೆಯಿಂದ ಪ್ರವಾಸ ಮಾಡಬೇಕು.
ಕೊಳ್ಳಿ ಬೆಟ್ಟಗಳು
ಸುಮಾರು 70 ಶಾರ್ಪ್ ಟರ್ನಿಂಗ್ಗಳು ಕೊಳ್ಳಿ ಬೆಟ್ಟ ಪ್ರವಾಸಿಗರಿಗೆ ಸಾಹಸಮಯ ಅನುಭವ ನೀಡುತ್ತದೆ. ಈ ಸ್ಥಳದಲ್ಲಿ ನಿಮಗೆ ಜಿಪಿಎಸ್ ಕೂಡ ಸಿಗದು. ಸಾಹಸ ಪ್ರವೃತ್ತಿಯವರು ಮತ್ತು ಧೈರ್ಯವಿರುವವರು ಮಾತ್ರ ಈ ಸ್ಥಳಕ್ಕೆ ಹೋಗಬೇಕು. ಆದರೆ ಬೆಟ್ಟದ ಮೇಲಕ್ಕೆ ಹತ್ತಿದ ಬಳಿಕ ಕಣ್ಣಿಗೆ ಕಾಣುವ ದೃಶ್ಯ ಮರೆಯಲಸಾಧ್ಯ.
ಸಿರುಮಲೈ
ತಮಿಳುನಾಡಿನ ಮತ್ತೊಂದು ಶಾಂತ ಗಿರಿಧಾಮ ತಾಣ ಸಿರುಮಲೈ. ಬಾಳೆ ತೋಟಗಳ ಮಧ್ಯೆ ತಂಪಾದ ಗಾಳಿ ನಿಮ್ಮನ್ನು ಪ್ರಚೋದಿಸುತ್ತದೆ. ಈ ಪ್ರದೇಶವನ್ನೊಮ್ಮೆ ಭೇಟಿ ಮಾಡಿದ್ರೆ ಮತ್ತೆ ಮತ್ತೆ ಹೋಗಲೇಬೇಕೆನಿಸುವ ಅನುಭವ ನೀಡುತ್ತದೆ.
ಕೂನೂರು
ಜನಸಂದಣಿಯಿಂದ ದೂರವಾಗಿ, ನೈಸರ್ಗಿಕ ಸುಂದರತೆಯೊಂದಿಗೆ ಉತ್ತಮ ಹವಾಮಾನ ಹೊಂದಿರುವ ತಾಣವೇ ಕೂನೂರು. ಸಿಮ್ಸ್ ಪಾರ್ಕ್ನಲ್ಲಿ ಸೆರೆಯಾದ ತೋಟದ ನೋಟ, ಆಟಿಕೆ ರೈಲು ಪ್ರಯಾಣ ಅದ್ಭುತ.
ಮೇಘಮಲೈ
‘ಮೇಘ’ ಅಂದರೆ ಮೋಡ, ಮತ್ತು ‘ಮಲೈ’ ಅಂದರೆ ಬೆಟ್ಟ. ಈ ಹೆಸರು ತಕ್ಕಂತೆ ಇಲ್ಲಿಯ ವಾತಾವರಣವೂ ಮಂಜಿನ ಕೂಡಿದೆ. ಇದು ಫೋನ್ ಸಿಗ್ನಲ್ ಇಲ್ಲದ, ಎಲ್ಲವೂ ಮೌನವಾಗಿರುವ ತಾಣ. ಬೋನಸ್ ಆಗಿ, ನೀವು ಬೆಳಿಗ್ಗೆ ಚಹಾ ಕುಡಿಯುತ್ತಿರುವಾಗ ಕಾಡೆಮ್ಮೆ ಅಥವಾ ಆನೆಯ ದರ್ಶನವಾಗಬಹುದು.