ದೈನಂದಿನ ಆಹಾರದಲ್ಲಿ ಅಕ್ಕಿಗೆ ಉನ್ನತ ಸ್ಥಾನವಿದೆ. ಹಲವಾರು ರೀತಿಯ ಪದಾರ್ಥಗಳಲ್ಲಿ ಬಳಸುವ ಅಕ್ಕಿ, ಸೀಮಿತ ಪ್ರಮಾಣದಲ್ಲಿ ಸೇವಿಸಿದಾಗ ಆರೋಗ್ಯಕ್ಕೂ ಸಹಾಯಕ. ಆದರೆ ಒಂದು ವಿಷಯದ ಬಗ್ಗೆ ಬಹುತೇಕರು ಗೊಂದಲದಲ್ಲಿರುತ್ತಾರೆ. ಅದು ಬಿಳಿ ಅಕ್ಕಿ ಒಳ್ಳೆಯದಾ? ಅಥವಾ ಕಂದು ಅಕ್ಕಿ ಆರೋಗ್ಯಕರವೇ? ಈ ಎರಡಕ್ಕೂ ಇರುವ ವ್ಯತ್ಯಾಸವೇನು ಏನು? ಮತ್ತು ನೀವು ಯಾವ ಅಕ್ಕಿಯನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸಂಸ್ಕರಣೆಯಲ್ಲಿ ಇರುವ ವ್ಯತ್ಯಾಸ:
ಕಂದು ಅಕ್ಕಿ ಅಂದರೆ ಹೊರಗಿನ ಹೊಟ್ಟನ್ನು ತೆಗೆದುಹಾಕಿದ ಅಕ್ಕಿ. ಇದು ಬಿಳಿ ಅಕ್ಕಿಗೆ ಹೋಲಿಸಿದರೆ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ, ವಿಶೇಷವಾಗಿ ಫೈಬರ್, ವಿಟಮಿನ್ಗಳು ಮತ್ತು ಖನಿಜಗಳು. ಇದು ಬಿಳಿ ಅಕ್ಕಿಗಿಂತ ಹೆಚ್ಚು ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಬಿಳಿ ಅಕ್ಕಿಯನ್ನು ಮಿಲ್ಲಿಂಗ್ ಹಾಗೂ ಪಾಲಿಶ್ ಮಾಡುವ ವೇಳೆ ಈ ಭಾಗಗಳನ್ನು ತೆಗೆದುಹಾಕಲಾಗುತ್ತದೆ. ಇದರಿಂದಾಗಿ, ಅದು ತಕ್ಷಣ ಬೇಯಿಸಬಹುದಾದ ಮೃದು ಅಕ್ಕಿಯಾಗಿ ಮಾರ್ಪಡುತ್ತದೆ.
ಪೌಷ್ಟಿಕ ತತ್ವಗಳಲ್ಲಿ ವ್ಯತ್ಯಾಸ:
ಕಂದು ಅಕ್ಕಿಯ ಒಂದು ಕಪ್ನಲ್ಲಿ ಸುಮಾರು 3.5 ಗ್ರಾಂ ಫೈಬರ್ ಇರುತ್ತದೆ, ಆದರೆ ಬಿಳಿ ಅಕ್ಕಿಯಲ್ಲಿ ಏನಿದೆ? ಕೇವಲ 0.6 ಗ್ರಾಂ ಅಷ್ಟೇ! ಅಲ್ಲದೆ ಕಂದು ಅಕ್ಕಿಯಲ್ಲಿ ಬಿ-ವಿಟಮಿನ್, ಮೆಗ್ನೀಸಿಯಂ, ಕಬ್ಬಿಣ ಮುಂತಾದ ಖನಿಜಗಳು ಹೆಚ್ಚು. ಬಿಳಿ ಅಕ್ಕಿಯು ಇವುಗಳನ್ನು ಬಹುತೇಕ ಕಳೆದುಕೊಳ್ಳುತ್ತದೆ. ಕೆಲವೊಂದು ಪ್ಯಾಕ್ಗಳು ಈ ಜೀವಸತ್ವಗಳನ್ನು ಮರಳಿ ಸೇರಿಸುತ್ತಿದ್ದರೂ ಸಹ, ಅದು ನೈಸರ್ಗಿಕವಾದ ಮಟ್ಟವನ್ನು ತಲುಪಲ್ಲ.
ರಕ್ತದ ಸಕ್ಕರೆಯ ಮೇಲೆ ಪರಿಣಾಮ:
ಡಯಾಬಿಟಿಸ್ ಇರುವವರು ಅಥವಾ ತೂಕ ನಿಯಂತ್ರಣದಲ್ಲಿ ಇಚ್ಛೆಪಡುವವರು ಕಂದು ಅಕ್ಕಿಯನ್ನು ಆಯ್ಕೆಮಾಡುವುದು ಉತ್ತಮ. ಇದಕ್ಕೆ ಕಡಿಮೆ ಗ್ಲೈಸೆಮಿಕ್ ಸೂಚಿ (GI) ಇರುತ್ತದೆ, ಅಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ನಿಧಾನವಾಗಿ ಏರಿಸುತ್ತೆ. ಬಿಳಿ ಅಕ್ಕಿಯು ಹೆಚ್ಚಿನ GI ಹೊಂದಿದ್ದು, ಇದು ತಕ್ಷಣದ ಸಕ್ಕರೆ ಏರಿಕೆಗೆ ಕಾರಣವಾಗಬಹುದು.
ರುಚಿ, ಅಡುಗೆ ಮತ್ತು ಜೀರ್ಣಕ್ರಿಯೆ:
ಬಿಳಿ ಅಕ್ಕಿಯು ಮೃದುವಾಗಿದ್ದು, ಬೇಗನೆ ಬೇಯುತ್ತದೆ. ಜೀರ್ಣಿಸಿಕೊಳ್ಳಲು ಸುಲಭವಾಗಿರುವ ಕಾರಣದಿಂದ ವೃದ್ಧರು, ಮಕ್ಕಳು ಅಥವಾ ಅನಾರೋಗ್ಯ ಹೊಂದಿರುವವರು ಇದನ್ನು ಹೆಚ್ಚು ಬಳಸುತ್ತಾರೆ. ಕಂದು ಅಕ್ಕಿ ಗಟ್ಟಿಯಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದರ ಆರೋಗ್ಯ ಲಾಭಗಳು ಹೆಚ್ಚು.
ಆರೋಗ್ಯಕರ ಆಯ್ಕೆ ಯಾವುದು?
ಒಟ್ಟಿನಲ್ಲಿ ಹೇಳಬೇಕಾದರೆ, ಎರಡೂ ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿವೆ. ಆದರೆ ದೀರ್ಘಕಾಲಿಕ ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಕಂದು ಅಕ್ಕಿ ಹಸಿವು ನಿಯಂತ್ರಣ, ಪೌಷ್ಟಿಕಾಂಶ ಮತ್ತು ರಕ್ತದ ಸಕ್ಕರೆಯ ನಿರ್ವಹಣೆಗೆ ಉತ್ತಮ. ಬಿಳಿ ಅಕ್ಕಿಯ ಪ್ರಿಯರಾದವರು ಕೂಡಾ, ಅದನ್ನು ಹೆಚ್ಚಿನ ತರಕಾರಿಗಳು ಹಾಗೂ ಪ್ರೋಟೀನ್ಗಳೊಂದಿಗೆ ಸಮತೋಲನಗೊಳಿಸಿದರೆ ಆರೋಗ್ಯಕರವಾಗಿರಬಹುದು.
ನಿಮ್ಮ ದೈನಂದಿನ ಆಹಾರದಲ್ಲಿ ಅಕ್ಕಿಯ ಆಯ್ಕೆ ವೈಯಕ್ತಿಕ ಅಗತ್ಯ, ಆರೋಗ್ಯದ ಗುರಿ ಮತ್ತು ಆಹಾರದ ಸಮತೋಲನದ ಮೇಲೆ ಅವಲಂಬಿತವಾಗಿರುತ್ತದೆ. ಆರೋಗ್ಯವನ್ನು ಪ್ರಥಮ ಪ್ರಾಮುಖ್ಯತೆಯಾಗಿ ನೋಡುತ್ತಿರುವವರು, ವಿಶೇಷವಾಗಿ ಮಧುಮೇಹ ಇರುವವರು ಅಥವಾ ತೂಕವರ್ಧನೆ ತಡೆಯಬೇಕಾದವರು, ಕಂದು ಅಕ್ಕಿಯತ್ತ ತಿರುಗುವುದು ಉತ್ತಮ.