ಮಳೆಗಾಲ ಆರಂಭವಾದರೆ ನವೀನತೆ ಮತ್ತು ತಂಪು ಹವಾಮಾನ ನಮ್ಮನ್ನು ಆಕರ್ಷಿಸುತ್ತದೆ. ಆದರೆ ಈ ಋತುವಿನೊಂದಿಗೆ ಅನೇಕ ಸೋಂಕುಗಳ ಅಪಾಯವೂ ಉಂಟಾಗುತ್ತದೆ. ಪರಿಸರದಲ್ಲಿ ಹೆಚ್ಚು ತೇವಾಂಶ ಇರುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು, ನೀರಿನ ಮಾಲಿನ್ಯದಿಂದ ಉಂಟಾಗುವ ಕಾಯಿಲೆಗಳು, ನಮ್ಮ ಜೀರ್ಣ ವ್ಯವಸ್ಥೆಯನ್ನು ಹಾನಿಮಾಡುತ್ತವೆ. ಈ ಕಾರಣದಿಂದಲೇ ಈ ಋತುವಿನಲ್ಲಿ ಆಹಾರದ ಗುಣಮಟ್ಟ, ನೀರಿನ ಶುದ್ಧತೆ ಮತ್ತು ನಿತ್ಯದ ಆಹಾರ ಪದ್ದತಿಯಲ್ಲಿ ಹೆಚ್ಚು ಎಚ್ಚರಿಕೆ ವಹಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗುತ್ತದೆ.
ಶುದ್ಧ ನೀರು ಮತ್ತು ಬಿಸಿಯಾದ ಆಹಾರವೇ ಮಳೆಗಾಲದ ಗೆಳೆಯರು
ಮಳೆಗಾಲದಲ್ಲಿ ಕುಡಿಯುವ ನೀರಿನ ಗುಣಮಟ್ಟ ಅತ್ಯಂತ ಮಹತ್ವದ್ದಾಗಿದೆ. ಶುದ್ಧೀಕರಿಸಿದ ಅಥವಾ ಕುದಿಸಿದ ನೀರನ್ನು ಮಾತ್ರ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಜೊತೆಗೆ, ತಾಜಾ ತರಕಾರಿಗಳು ಹಾಗೂ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು. ಫ್ರಿಡ್ಜ್ನಲ್ಲಿರುವ ಹಳೆಯ ಆಹಾರ, ಹಸಿ ಆಹಾರ ಅಥವಾ ಬೇಯದ ಆಹಾರವನ್ನು ಸೇವಿಸುವುದು ಸೂಕ್ತವಲ್ಲ. ಬಿಸಿಯಾಗಿ ಬೇಯಿಸಿದ ಆಹಾರ ಸೋಂಕುಗಳಿಂದ ರಕ್ಷಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ.
ಕರಿದ ಹಾಗೂ ಮಸಾಲೆಜಾಸ್ತಿ ಇರುವ ಆಹಾರದಿಂದ ದೂರವಿರಿ
ಬಜ್ಜಿ, ಪಾನಿಪುರಿ, ಚಾಟ್ ಮುಂತಾದ ಬೀದಿ ಆಹಾರಗಳು ಮಳೆಯ ಸಮಯದಲ್ಲಿ ಆರೋಗ್ಯದ ಶತ್ರುಗಳಾಗಬಹುದು. ಈ ಆಹಾರ ಪದಾರ್ಥಗಳ ಮೇಲೆ ನೊಣಗಳು ಮತ್ತು ಸೊಳ್ಳೆಗಳ ಹಾವಳಿ ಜಾಸ್ತಿ ಇರುತ್ತದೆ. ಇವು ಬ್ಯಾಕ್ಟೀರಿಯಾ ಹಾಗೂ ವೈರಸ್ ಹರಡುವ ಪ್ರಮುಖ ಕಾರಣಗಳಾಗಬಹುದು. ಮಸಾಲೆ ಮತ್ತು ಉಪ್ಪಿನಾಂಶ ಜಾಸ್ತಿ ಇರುವ ಆಹಾರಗಳು ದೇಹದಲ್ಲಿ ಉಷ್ಣತೆ ಹೆಚ್ಚಿಸಿ ಅಜೀರ್ಣಕ್ಕೆ ಕಾರಣವಾಗುತ್ತವೆ.
ಕಹಿ ಪದಾರ್ಥಗಳು ರೋಗನಿರೋಧಕ ಶಕ್ತಿಗೆ ದೋಸ್ತಿಗಳು
ಹಾಗಲಕಾಯಿ, ಬೇವು, ಮೆಂತ್ಯ, ಅರಿಶಿನದಂತಹ ಕಹಿ ಪದಾರ್ಥಗಳು ಮಳೆಗಾಲದಲ್ಲಿ ಸೋಂಕುಗಳನ್ನು ತಡೆಯಲು ಸಹಕಾರಿಯಾಗುತ್ತವೆ. ಇವುಗಳನ್ನು ಆಹಾರದಲ್ಲಿ ಸೇರಿಸಿಕೊಂಡರೆ ದೇಹದ ಪ್ರತಿರೋಧ ಶಕ್ತಿ ಬಲವರ್ಧನೆಗೊಳ್ಳುತ್ತದೆ.
ಹಸಿ ಮಾಂಸ ಮತ್ತು ಸಮುದ್ರ ಆಹಾರ ತಪ್ಪಿಸಿ
ಈ ಋತುವಿನಲ್ಲಿ ಮೀನು, ಸೀಗಡಿ, ಏಡಿ ಮುಂತಾದ ಸಮುದ್ರ ಆಹಾರಗಳು ಸರಿಯಾಗಿ ಸಂಗ್ರಹಿಸದಿದ್ದರೆ ತುರ್ತು ಆರೋಗ್ಯ ತೊಂದರೆಗಳನ್ನು ಉಂಟುಮಾಡಬಹುದು. ಈ ಆಹಾರ ಪದಾರ್ಥಗಳು ತಾಜಾವಾಗಿರದಿದ್ದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಇವುಗಳನ್ನು ತ್ಯಜಿಸುವುದು ಉತ್ತಮ.
naturally immunize ಮಾಡುವ ಮನೆ ಮದ್ದುಗಳು
ಆಹಾರದಲ್ಲಿ ಶುಂಠಿ, ಅರಿಶಿನ ಸೇರಿಸಿಕೊಳ್ಳುವುದು ರೋಗನಿರೋಧಕ ಶಕ್ತಿಗೆ ಬಹುಪಾಲು ನೆರವಾಗುತ್ತದೆ. ಇವು ದೇಹದ ಅಂತರಂಗದಿಂದಲೇ ರಕ್ಷಣೆ ನೀಡುತ್ತವೆ. ಜೊತೆಗೆ ಪ್ರತಿ ದಿನ ಲಘುವಾಗಿ ಚಹಾ ಅಥವಾ ಕಷಾಯದ ಮೂಲಕ ಇವುಗಳನ್ನು ಸೇವಿಸಬಹುದು.
ಮಳೆಗಾಲದ ಸುಂದರ ಕ್ಷಣಗಳನ್ನು ಆರೋಗ್ಯದೊಂದಿಗೆ ಕಳೆಯಲು ಸರಿಯಾದ ಆಹಾರ ಕ್ರಮ, ಶುದ್ಧ ನೀರು ಮತ್ತು ಚಿಕ್ಕ ಎಚ್ಚರಿಕೆಗಳು ಸಾಕು. ಇವು ನಿಮ್ಮ ಆರೋಗ್ಯವನ್ನು ಬಲಿಷ್ಠಗೊಳಿಸುವುದಷ್ಟೇ ಅಲ್ಲ, ಸೋಂಕುಗಳಿಂದ ರಕ್ಷೆಯೂ ನೀಡುತ್ತವೆ.