ನ್ಯಾಷನಲ್ ಹೆರಾಲ್ಡ್ ಕೇಸ್‌ । ಸೋನಿಯಾ, ರಾಹುಲ್ ಗಾಂಧಿ ವಿರುದ್ದ ಹಣ ವರ್ಗಾವಣೆ ಆರೋಪ: ತೀರ್ಪು ಕಾಯ್ದಿರಿಸಿದ ಕೋರ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ ಹಾಗೂ ಉಳಿದ ಐವರ ವಿರುದ್ಧದ ಹಣ ವರ್ಗಾವಣೆ ಆರೋಪವನ್ನು ಪರಿಗಣಿಸಬೇಕೆ ಎಂಬ ಕುರಿತು ದೆಹಲಿ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

ಜುಲೈ 29ರಂದು ಆದೇಶ ಪ್ರಕಟಿಸುವುದಾಗಿ ರೋಸ್‌ ಅವೆನ್ಯೂ ಕೋರ್ಟ್‌ ಸಂಕೀರ್ಣದಲ್ಲಿನ ಭ್ರಷ್ಟಾಚಾರ ತಡೆ ಕಾಯ್ದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ತಿಳಿಸಿದ್ದಾರೆ.

ಗಾಂಧಿ ಕುಟುಂಬದವರಲ್ಲದೇ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಸುನಿಲ್‌ ಭಂಡಾರಿ ಹಾಗೂ ಯಂಗ್ ಇಂಡಿಯನ್, ಡೋಟೆಕ್ಸ್ ಮರ್ಚಂಡೈಸ್ ಕೂಡ ಜಾರಿ ನಿರ್ದೇಶನಾಲಯ ಪ್ರಕರಣದ ಆರೋಪಿಗಳನ್ನಾಗಿ ಹೆಸರಿಸಿತ್ತು.

ಸುಮಾರು 2,000 ಕೋಟಿ ರೂ.ಗಿಂತಗೂ ಅಧಿಕ ಮಾರುಕಟ್ಟೆ ಮೌಲ್ಯದ ಆಸ್ತಿಯನ್ನು ಯಂಗ್‌ ಇಂಡಿಯನ್‌ ಸಂಸ್ಥೆಯು ತನ್ನ ವಶಕ್ಕೆ ಪಡೆಯಲು ಅವ್ಯವಹಾರ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಷೇರುಗಳ ಮೌಲ್ಯ, ಎಜೆಎಲ್‌ನ ಸ್ಥಿರ ಆಸ್ತಿಗಳು ಮತ್ತು ಅವುಗಳಿಂದ ದೊರೆಯುವ ಬಾಡಿಗೆಯನ್ನು ಅಪರಾಧದ ಗಳಿಕೆ ಎಂದು ಇಡಿ ದೂರಿತ್ತು. ಆದ್ರೆ ಆಸ್ತಿಯನ್ನ ಬಳಸದಿದ್ದರೂ ಅಥವಾ ಅಂದಾಜಿಸದಿದ್ದರೂ ಹಣ ವರ್ಗಾವಣೆ ಆರೋಪ ಮಾಡಿರುವುದು ವಿಚಿತ್ರ ಮತ್ತು ಹಿಂದೆಂದೂ ಕೇಳರಿಯದ ಪ್ರಕರಣ ಎಂದು ಗಾಂಧಿ ಕುಟುಂಬ ವಾದಿಸಿತ್ತು.

ಸೋನಿಯಾ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬದ ನಿಯಂತ್ರಣದಲ್ಲಿರುವ – ಯಂಗ್ ಇಂಡಿಯನ್ ಲಿಮಿಟೆಡ್‌ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಖಾಸಗಿ ದೂರು ದಾಖಲಿಸಿ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಆಸ್ತಿ ದುರುಪಯೋಗದ ಆರೋಪ ಮಾಡುವ ಮೂಲಕ ಪ್ರಕರಣ ಬಹಿರಂಗಗೊಂಡಿತ್ತು.

ಕಳೆದ ಏಪ್ರಿಲ್ 15 ರಂದು ಗಾಂಧಿ ಕುಟುಂಬ, ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹಾಗೂ ಇತರರ ವಿರುದ್ಧ ಇಡಿ ಪ್ರಾಸಿಕ್ಯೂಷನ್ ದೂರು ದಾಖಲಿಸಿತ್ತು. ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಎಸ್‌.ವಿ ರಾಜು, ವಿಶೇಷ ವಕೀಲ ಜೊಹೆಬ್ ಹೊಸೈನ್ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್‌.ಕೆ ಮಟ್ಟಾ ಮತ್ತವರ ತಂಡ ಇಡಿ ಪರವಾಗಿ ವಾದ ಮಂಡಿಸಿತ್ತು. ಸೋನಿಯಾ ಗಾಂಧಿ ಅವರನ್ನ ಡಾ. ಅಭಿಷೇಕ್‌ ಮನು ಸಿಂಘ್ವಿ ಹಾಗೂ ಅವರ ಕಾನೂನು ತಂಡ ಪ್ರತಿನಿಧಿಸಿತ್ತು. ಹಿರಿಯ ವಕೀಲ ಆರ್.ಎಸ್ ಮಾ ಅವರ ತಂಡ ರಾಹುಲ್‌ ಪರವಾಗಿ ವಾದ ಮಂಡಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!