ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ನಿಫಾ ವೈರಸ್ ಹೆಚ್ಚುತ್ತಿದ್ದು, ಈ ಹಿನ್ನೆಲೆ ಆರು ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಶನಿವಾರ ವ್ಯಕಿಯೊಬ್ಬರು ಸಾವನ್ನಪ್ಪಿದ್ದು, ನಿಫಾ ವೈರಸ್ ತಗಲಿರುವ ಶಂಕೆ ವ್ಯಕ್ತವಾಗಿದೆ. ಈ ಮೂಲಕ ಕೇರಳದಲ್ಲಿ ಶಂಕಿತ ನಿಫಾ ಸೋಂಕಿಗೆ ಎರಡನೇ ವ್ಯಕ್ತಿ ಬಲಿಯಾದಂತಾಗಿದೆ. ಈ ಹಿಂದೆ ಮಲಪ್ಪುರಂ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯ ಸರ್ಕಾರವು ಆರು ಜಿಲ್ಲೆಗಳಲ್ಲಿ ಎಚ್ಚರಿಕೆ ಆದೇಶವನ್ನು ಹೊರಡಿಸಿದೆ.
ಈ ಕುರಿತು ಮಾತನಾಡಿರುವ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು, ವಯನಾಡ್ ಮತ್ತು ತ್ರಿಶೂರ್ ಜಿಲ್ಲೆಗಳ ಆಸ್ಪತ್ರೆಗಳಿಗೆ ನಿಫಾ ವೈರಸ್ ಲಕ್ಷಣಗಳನ್ನು ಹೊಂದಿರುವವರ ಬಗ್ಗೆ ವರದಿ ಮಾಡಲು ಆದೇಶಿಸಲಾಗಿದೆ. ನಿಫಾ ಸೋಂಕಿನ ಲಕ್ಷಣಗಳನ್ನು ಪತ್ತೆಹಚ್ಚಲು ಆರೋಗ್ಯ ತಂಡಗಳು ಈ ಪ್ರದೇಶದಲ್ಲಿ ಕಣ್ಗಾವಲು ನಡೆಸುತ್ತಿವೆ ಎಂದು ತಿಳಿದರು.
ನಿಫಾ ವೈರಸ್ ಸೋಂಕಿತರನ್ನು ಪತ್ತೆ ಹಚ್ಚಲು ಕ್ಷೇತ್ರ ತಂಡಗಳನ್ನುರಚಿಸಲಾಗಿದೆ. ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಲು ಲಭ್ಯವಿರುವ ಎಲ್ಲಾ ಡೇಟಾವನ್ನು ಬಳಸಲಾಗುತ್ತಿದೆ. ಪಾಲಕ್ಕಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ 57 ವರ್ಷದ ವ್ಯಕ್ತಿಯ ಪ್ರಕರಣದಲ್ಲಿ ಸಂಪರ್ಕ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.
ಪಾಲಕ್ಕಾಡ್ ವ್ಯಕ್ತಿಯಲ್ಲಿ ನಿಫಾ ಸೋಂಕಿನ ಲಕ್ಷಣಗಳಿದ್ದು, ರಾಜ್ಯ ಸರ್ಕಾರವು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಿಂದ (NIV) ದೃಢೀಕರಣಕ್ಕಾಗಿ ಕಾಯುತ್ತಿದೆ ಎಂದು ತಿಳಿಸಿದರು.
ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಿಂದ ದೃಢೀಕರಣ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ನಿಪಾ ವೈರಸ್ ಸಂಪರ್ಕ ಪಟ್ಟಿಯಲ್ಲಿ ಈಗ ಒಟ್ಟು 543 ಜನರು ಸೇರಿದ್ದಾರೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸೂಚನೆ
ನಿಫಾ ಸೋಂಕು ಹರಡದಂತೆ ತಡೆಗಟ್ಟಲು ಸಾರ್ವಜನಿಕರಿಗೆ ಅಧಿಕಾರಿಗಳು ಕೆಲವು ಸೂಚನೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಅನಗತ್ಯವಾಗಿ ಆಸ್ಪತ್ರೆಗೆ ಬರಬೇಡಿ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರು ಮತ್ತು ಸ್ನೇಹಿತರನ್ನು ಸಾಧ್ಯವಾದಷ್ಟು ಭೇಟಿ ಮಾಡುವುದನ್ನು ತಪ್ಪಿಸಿ, ರೋಗಿಗಳೊಂದಿಗೆ ಸಹಾಯಕರಾಗಿ ಒಬ್ಬರು ಮಾತ್ರ ಇರಬೇಕು, ಆಸ್ಪತ್ರೆಗೆ ಬರುವಾಗ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಅಧಿಕಾರಿಗಳು ಸೂಚನೆಯಲ್ಲಿ ತಿಳಿಸಿದ್ದಾರೆ.