ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮತ್ತೆ ಚುರುಕು ಪಡೆದಿದ್ದು, ಸೋಮವಾರ ಇಡೀ ದಿನ ಜಿಲ್ಲೆಯ ಬಹುತೇಕ ಕಡೆ ನಿರಂತರವಾಗಿ ಮಳೆ ಸುರಿದಿದೆ.
ಬೆಳಗ್ಗಿನಿಂದಲೇ ಮಳೆ ಆರಂಭವಾಗಿದ್ದು, ನಾಲ್ಕೈದು ಬಾರಿ ಧಾರಾಕಾರ ಸುರಿದಿದೆ. ಮಂಗಳೂರು ನಗರದಲ್ಲಿ ದಿನವಿಡೀ ಮೋಡ ಕವಿದ ವಾತಾವರಣದೊಂದಿಗೆ ಉತ್ತಮ ಮಳೆ ಬಿದ್ದಿದೆ. ಮಧ್ಯಾಹ್ನ ವೇಳೆಗೆ ಸುಮಾರು 20 ನಿಮಿಷಗಳ ಕಾಲ ಸುರಿದ ಮಳೆಯಿಂದ ನಗರದ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು. ಬೆಳಗ್ಗೆ ಮತ್ತು ಮಧ್ಯಾಹ್ನ ಸುರಿದ ಭಾರಿ ಮಳೆಯಿಂದ ಎಂದಿನಂತೆ ನಗರದ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಯಿತು. ಗಾಳಿ ಸಹಿತ ರಭಸದ ಮಳೆಯಿಂದ ರಾಜಕಾಲುವೆಗಳು ಉಕ್ಕಿ ಹರಿದಿವೆ.
ಮೀನುಗಾರರಿಗೆ ಎಚ್ಚರಿಕೆ:
ಜುಲೈ 17ರವರೆಗೆ ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರಿ ಗಾಳಿ ಬೀಸುವುದರಿಂದ ನಾಡದೋಣಿ ಮೀನುಗಾರರು ಸೇರಿದಂತೆ ಯಾರೂ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 43.4 ಮಿಮೀ ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಜು.20ರವರೆಗೆ ಉತ್ತಮ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.