ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಆವರಣದಲ್ಲಿದ್ದ ಟ್ಯಾಂಕಿನ ನೀರು ಸೇವಿಸಿ 12 ಮಕ್ಕಳು ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಅಸ್ವಸ್ಥ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಾಲೆಯಲ್ಲಿ 41 ಮಕ್ಕಳಿದ್ದು ಅಲ್ಲದೆ ಈ ಶಾಲೆಯ ಪಕ್ಕದಲ್ಲೇ 20 ಅಧಿಕ ಮನೆಗಳಿದ್ದು, ಎಲ್ಲರೂ ಈ ಟ್ಯಾಂಕಿನ ನೀರನ್ನೇ ಅವಲಂಭಿಸಿದ್ದರು ಎನ್ನಲಾಗಿದೆ.
ನಿನ್ನೆ ಬೆಳಗ್ಗೆ 6 ಗಂಟೆಯ ಸುಮಾರಿಗೆ ಇದೇ ಟ್ಯಾಂಕಿನ ಮೂಲಕ ನೀರು ಸಂಗ್ರಹ ಮಾಡಲಾಗಿದೆ. ಇದಾದ ಬಳಿಕವಷ್ಟೇ ಇದಕ್ಕೆ ಕೀಟನಾಶಕ ಬೆರಸಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆ 6 ಗಂಟೆಯ ಮೊದಲು ಹಲವು ಕುಟುಂಬಗಳು ಟ್ಯಾಂಕ್‌ನಿಂದ ನೀರು ಸಂಗ್ರಹಿಸಿದ್ದವು. ಆದರೆ, ಅವರಲ್ಲಿ ಯಾರಿಗೂ ಆರೋಗ್ಯ ಸಮಸ್ಯೆಗಳು ಕಂಡು ಬಂದಿಲ್ಲ. ಬಳಿಕ ನೀರು ಸೇವಿಸಿದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದಿದೆ. ಅಪರಿಚಿತ ವ್ಯಕ್ತಿಗಳು ನೀರಿನ ಟ್ಯಾಂಕ್’ಗೆ ಕೀಟನಾಶಕ ಬೆರೆಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ನೀರು ಕುಡಿದ ತಕ್ಷಣ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿ ಶಾಲೆಗೆ ಆಗಮಿಸಿ ಸೂಕ್ತ ಮುನ್ನಚ್ಚರಿಕೆ ಕ್ರಮ ವಹಿಸಿದ್ದಾರೆ.