ದಿನಕ್ಕೆ ಎರಡು ಬಾರಿ ಬ್ರಷ್ ಮಾಡುವ ಅಭ್ಯಾಸ ಹೆಚ್ಚಿನವರಿಗೆ ಇದ್ದರೂ, ಬಾಯಿಯ ಸಂಪೂರ್ಣ ಸ್ವಚ್ಛತೆಗೆ ಅದು ಸಾಕಾಗುತ್ತಿಲ್ಲ ಎಂಬುದರ ಅರಿವು ಕೆಲವರಿಗಷ್ಟೇ ಇದೆ. ಉಸಿರಿನ ದುರ್ಗಂಧ, ಹಲ್ಲುಗಳ ನಡುವೆ ಶೇಖರಿಸುವ ಬ್ಯಾಕ್ಟೀರಿಯಾ, ಹಾಗೂ ಬಾಯಿ ಹುಣ್ಣುಗಳು ಈ ಎಲ್ಲಾ ಸಮಸ್ಯೆಗಳಿಗೆ ಮೌತ್ವಾಶ್ ಬಳಕೆ ತುಂಬಾ ಉಪಯುಕ್ತ. ಆದರೆ ಅಂಗಡಿಗಳಲ್ಲಿ ಸಿಗುವ ಮೌತ್ವಾಶ್ಗಳಲ್ಲಿ ಇರುವ ಆಲ್ಕೋಹಾಲ್ ಮತ್ತು ರಾಸಾಯನಿಕ ಅಂಶಗಳು ದೀರ್ಘಕಾಲ ಬಳಕೆಯಿಂದ ಬಾಯಿಗೆ ತೊಂದರೆಯಾಗಬಹುದು. ಆದ್ದರಿಂದ, ನೈಸರ್ಗಿಕ ವಿಧಾನದಲ್ಲಿ ಮನೆಯಲ್ಲಿ ತಯಾರಿಸಬಹುದಾದ ಮೌತ್ವಾಶ್ಗಳೇ ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿ.
ಲಿಂಬೆ ರಸದ ಮೌತ್ವಾಶ್
ಲಿಂಬೆಯಲ್ಲಿ ಇರುವ ಸಿಟ್ರಿಕ್ ಆಮ್ಲ ಹಲ್ಲುಗಳ ಮೇಲೆ ಇರುವ ಹಳದಿ ಕಲೆಗಳನ್ನು ನಿವಾರಿಸುತ್ತದೆ. 1 ಕಪ್ ಉಗುರುಬೆಚ್ಚಗಿನ ನೀರಿಗೆ ಒಂದು ಲಿಂಬಿನ ರಸವನ್ನು ಹಿಂಡಿ ಚೆನ್ನಾಗಿ ಮಿಕ್ಸ್ ಮಾಡಿ. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ 60 ಸೆಕೆಂಡು ಬಾಯಿಗೆ ಈ ದ್ರಾವಣವನ್ನು ಹಾಕಿ ಮುಕ್ಕಳಿಸಿ. ಇದು ಬಾಯಿಯಿಂದ ದುರ್ಗಂಧವನ್ನು ನಿವಾರಿಸುತ್ತದೆ ಮತ್ತು ತಾಜಾತನ ನೀಡುತ್ತದೆ.
ಅರಿಶಿಣದ ಮೌತ್ವಾಶ್
ಅರಿಶಿಣದಲ್ಲಿ ಉರಿಯೂತ ನಿವಾರಕ ಗುಣವಿದ್ದು, ಹಲ್ಲು ನೋವು, ಬಾಯಿಯ ಚರ್ಮ ಸಮಸ್ಯೆಗಳಿಗೆ ಉತ್ತಮ ಪರಿಹಾರ. ಅರ್ಧ ಟೀಸ್ಪೂನ್ ಅರಿಶಿಣ, ಬೇಕಿಂಗ್ ಸೋಡಾ, ಕ್ಯಾಲ್ಸಿಯಂ ಕಾರ್ಬೋನೇಟ್, ಎಲ್-ಅರ್ಜಿನೈನ್, ಜೊತೆಗೆ 4-5 ಲವಂಗಗಳನ್ನು 2-3 ತಾಸು ನೆನೆಸಿ, ನಂತರ ಮಿಶ್ರಣ ಮಾಡಿ ಬಳಸಿ. ಇದು ಬಾಯಿಯ ಆಂತರಿಕ ಆರೋಗ್ಯಕ್ಕೆ ಸಹಕಾರಿ.
ಅಲೋವೆರಾ ಮೌತ್ವಾಶ್
ಅಲೋವೆರಾ ಸಹಜವಾಗಿ ಶಮನಕಾರಿ. ಅರ್ಧ ಕಪ್ ಅಲೋವೆರಾ ಜ್ಯೂಸ್, ಅರ್ಧ ಕಪ್ ಡಿಸ್ಟಿಲ್ಡ್ ವಾಟರ್, 3 ಹನಿ ಪುದೀನಾ ಎಸೆನ್ಸ್ ತೈಲ, ಒಂದೂವರೆ ಟೀಸ್ಪೂನ್ ಬೇಕಿಂಗ್ ಸೋಡಾ ಸೇರಿಸಿ ಬಾಟಲಿಗೆ ಹಾಕಿ ಚೆನ್ನಾಗಿ ಕುಲುಕಿರಿ. ಇದನ್ನು ಪ್ರತಿದಿನ ಎರಡು ಬಾರಿ ಬಳಸಿ. ಉರಿಯೂತ ಕಡಿಮೆಯಾಗುತ್ತದೆ.
ಲವಂಗದ ಮೌತ್ವಾಶ್
ಲವಂಗ ಮತ್ತು ದಾಲ್ಚಿನ್ನಿಯ ಮಿಶ್ರಣವು ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿ. 5-6 ಲವಂಗ, 1 ಟೀಸ್ಪೂನ್ ದಾಲ್ಚಿನ್ನಿ ಪುಡಿ, 4 ಹನಿ ಪುದೀನಾ ತೈಲವನ್ನು 1 ಕಪ್ ನೀರಿಗೆ ಹಾಕಿ 10 ನಿಮಿಷ ಕುದಿಸಿ, ನಂತರ ತಣ್ಣಗಾದ ಮೇಲೆ ಬಾಯಿ ಮುಕ್ಕಳಿಸಿ. ಇದು ಬಾಯಿಯಿಂದ ದುರ್ವಾಸನೆ ತಡೆಯುತ್ತದೆ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.