ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಲಿವರ್ (ಯಕೃತ್ತು) ಮುಖ್ಯ ಪಾತ್ರ ವಹಿಸುತ್ತದೆ. ಇದು ರಕ್ತ ಶುದ್ಧೀಕರಣ, ಪಿತ್ತ ಉತ್ಪಾದನೆ, ಪೋಷಕಾಂಶ ಸಂಸ್ಕರಣೆ, ವಿಷವಸ್ತು ನಿರ್ವಹಣೆ ಸೇರಿದಂತೆ ಅನೇಕ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸುತ್ತದೆ. ಆದರೆ, ಇತ್ತೀಚಿನ ಆಹಾರ, ವಾಯು ದೂಷಣ, ಮದ್ಯಪಾನ ಮತ್ತು ನಿಶ್ಚಲ ಜೀವನಶೈಲಿಯಿಂದ ಯಕೃತ್ತಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಅಂಶಗಳು ಕೊಬ್ಬಿನ ಯಕೃತ್ತು, ಹೆಪಟೈಟಿಸ್, ಲಿವರ್ ಸಿರೋಸಿಸ್ ಅಥವಾ ಲಿವರ್ ಕ್ಯಾನ್ಸರ್ಗೆ ಕಾರಣವಾಗಬಹುದು. ಲಿವರ್ ಸಂಪೂರ್ಣವಾಗಿ ವೈಫಲ್ಯಗೊಂಡರೆ ಜೀವ ಭಯವೂ ಉಂಟಾಗಬಹುದು. ಆದ್ದರಿಂದ, ಯಕೃತ್ತು ಹಾನಿಯಾಗುತ್ತಿರುವ ಆರಂಭಿಕ ಲಕ್ಷಣಗಳನ್ನು ಗಮನಿಸಿ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.
ಆಯಾಸ, ದೌರ್ಬಲ್ಯ:
ಸಣ್ಣ ಕೆಲಸಕ್ಕೂ ದಣಿವು ಕಾಣಿಸಿಕೊಳ್ಳುವುದು, ವಿಶ್ರಾಂತಿಯಾದರೂ ಸುಸ್ತು ಕಳೆಯದಿರುವುದು ಯಕೃತ್ತಿನ ಸಮಸ್ಯೆಯ ಪ್ರಾರಂಭಿಕ ಸೂಚನೆ. ದೈಹಿಕ ಶಕ್ತಿ ಕುಗ್ಗಿದರೆ ಕೂಡಲೇ ತಜ್ಞರೊಂದಿಗೆ ಮಾತುಕತೆ ಮಾಡುವುದು ಉತ್ತಮ.
ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು:
ಇದು ಕಾಮಾಲೆ ಅಥವಾ ಜಾಂಡೀಸ್ನ ಪ್ರಮುಖ ಲಕ್ಷಣ. ಲಿವರ್ ಬಿಲಿರುಬಿನ್ನ್ನು ಶೋಧಿಸದೇ ಬಿಟ್ಟುಬಿಟ್ಟಾಗ ಇದರ ಪ್ರಮಾಣ ಹೆಚ್ಚಾಗಿ ಚರ್ಮ ಮತ್ತು ಕಣ್ಣು ಹಳದಿಯಾಗುತ್ತದೆ.
ಗಾಢ ಬಣ್ಣದ ಮೂತ್ರ:
ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಶರೀರದಲ್ಲಿ ಬಿಲಿರುಬಿನ್ ಮಟ್ಟ ಏರುತ್ತದೆ. ಈ ಕಾರಣದಿಂದ ಮೂತ್ರದ ಬಣ್ಣ ಗಾಢವಾಗಿ ಕಾಣಿಸಿಕೊಳ್ಳುತ್ತದೆ. ಇದು ಲಿವರ್ ವೈಫಲ್ಯಕ್ಕೂ ಮುನ್ನದ ಪ್ರಮುಖ ಲಕ್ಷಣ.
ಹೊಟ್ಟೆ ಉಬ್ಬುವುದು ಮತ್ತು ನೋವು:
ಯಕೃತ್ತು ಪ್ರೋಟೀನ್ ಮಟ್ಟವನ್ನು ನಿಯಂತ್ರಿಸಲು ವಿಫಲವಾದಾಗ, ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗುತ್ತಿದ್ದು, ಈ ಭಾಗ ಉಬ್ಬಿ ನೋವಿಗೂ ಕಾರಣವಾಗುತ್ತದೆ.
ಚರ್ಮದ ಮೇಲೆ ತುರಿಕೆ:
ಯಕೃತ್ತಿನ ದೋಷಗಳಿಂದ ಪಿತ್ತದ ಲವಣಗಳು ಚರ್ಮದ ಕೆಳಗೆ ಶೇಖರಗೊಳ್ಳುತ್ತವೆ. ಇದರ ಪರಿಣಾಮ ನಿರಂತರ ತುರಿಕೆ ಉಂಟಾಗಬಹುದು. ದದ್ದು ಇಲ್ಲದೆ ತುರಿಕೆ ಇದ್ದರೆ, ಲಿವರ್ ಪರೀಕ್ಷೆ ಮಾಡಿಸಿಕೊಳ್ಳುವುದು ಸುರಕ್ಷಿತ.
ಇತರ ಅಲಕ್ಷ್ಯ ಮಾಡಬಾರಾದ ಲಕ್ಷಣಗಳು:
ಹಸಿವಿನ ಕೊರತೆ, ವಾಕರಿಕೆ, ವಾಂತಿ, ಕಾಲು-ಕೀಲುಗಳಲ್ಲಿ ಉಬ್ಬರ, ಎದೆ ಬಡಿತ ಹೆಚ್ಚಾಗುವುದು ಇತ್ಯಾದಿ ಲಕ್ಷಣಗಳು ಕಂಡುಬಂದರೂ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ಯಕೃತ್ತಿನ ಆರೋಗ್ಯ ಸುಸ್ಥಿರವಾಗಿರಲು ಸಮತೋಲನದ ಆಹಾರ, ಮದ್ಯಪಾನದಿಂದ ದೂರವಿರುವುದು, ನಿಯಮಿತ ವ್ಯಾಯಾಮ ಮತ್ತು ಸಮಯಕ್ಕೆ ತಪಾಸಣೆ ಅತ್ಯವಶ್ಯಕ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)