ಲೈಂಗಿಕ ಕಿರುಕುಳದ ವಿರುದ್ಧ ಧ್ವನಿ ಎತ್ತಿದ್ದ ವಿದ್ಯಾರ್ಥಿನಿ ಸಾವು: ವ್ಯವಸ್ಥಿತ ಕೊಲೆ ಎಂದ ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಾಧ್ಯಾಪಕರೊಬ್ಬರ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದು, ಪ್ರಕರಣ ಸಂಬಂಧ ಸರ್ಕಾರದ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ತೀವ್ರವಾಗಿ ಕಿಡಿಕಾರಿದ್ದಾರೆ.

ಒಡಿಶಾದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ವಿದ್ಯಾರ್ಥಿನಿಯ ಸಾವು, ಬಿಜೆಪಿ ವ್ಯವಸ್ಥೆಯಿಂದ ನಡೆದ ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ. ಧೈರ್ಯಶಾಲಿ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಳು. ಆದರೆ, ನ್ಯಾಯದ ಬದಲು, ಆಕೆಗೆ ಪದೇ ಪದೇ ಬೆದರಿಕೆ, ಕಿರುಕುಳ ಮತ್ತು ಅವಮಾನ ಮಾಡಲಾಯಿತು. ಆಕೆಯನ್ನು ರಕ್ಷಿಸಬೇಕಾದವರೇ ಆಕೆ ಕುಗ್ಗುವಂತೆ ಮಾಡಿದರು. ಯಾವಾಗಲೂ ಆಗುವಂತೆಯೇ ಈಗಲೂ ಬಿಜೆಪಿ ವ್ಯವಸ್ಥೆಯು ಆರೋಪಿಗಳನ್ನು ರಕ್ಷಿಸಿದೆ. ಮತ್ತೊಬ್ಬ ಮುಗ್ಧ ಯುವತಿ ಬೆಂಕಿ ಹಚ್ಚಿಕೊಳ್ಳುವಂತಾಯಿತು. ಇದು ಆತ್ಮಹತ್ಯೆಯಲ್ಲ, ವ್ಯವಸ್ಥೆಯೇ ಆಯೋಜಿಸಿರುವ ಕೊಲೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಮೋದಿಯವರೇ ಒಡಿಶಾ ಆಗಿರಲಿ ಅಥವಾ ಮಣಿಪುರ ಆಗಿರಲಿ, ದೇಶದ ಹೆಣ್ಣುಮಕ್ಕಳು ಬೆಂಕಿಯಲ್ಲಿ ಬೆಂದು ಸಾಯುತ್ತಿದ್ದಾರೆ. ಆದರೆ, ನೀವು ಮೌನವಾಗಿ ಕುಳಿತಿದ್ದೀರಿ. ದೇಶವು ಉತ್ತರಗಳನ್ನು ಬಯಸುತ್ತಿದೆಯೇ ವಿನಃ ನಿಮ್ಮ ಮೌನವನ್ನಲ್ಲ. ಭಾರತದ ಹೆಣ್ಣುಮಕ್ಕಳಿಗೆ ಭದ್ರತೆ ಮತ್ತು ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.

ಏತನ್ಮಧ್ಯೆ ಒಡಿಶಾದ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಖಂಡಿಸಿ, ಕಾಂಗ್ರೆಸ್ ನೇತೃತ್ವದ ಎಂಟು ವಿರೋಧ ಪಕ್ಷಗಳು ವಿದ್ಯಾರ್ಥಿನಿಯ ಸಾವಿಗೆ ಖಂಡನೆ ವ್ಯಕ್ತಪಡಿಸಿ, ಪ್ರತಿಭಟಿಸಲು ಜುಲೈ 17 ರಂದು ಒಡಿಶಾ ಬಂದ್‌ಗೆ ಕರೆ ನೀಡಿವೆ. ಎಂಟು ಪಕ್ಷಗಳು ಬಂದ್‌ಗೆ ಬೆಂಬಲ ನೀಡುತ್ತಿವೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!