ನಾವು ಅಡುಗೆಗೆ ಬಳಸೋ ಅರಿಶಿಣವೆಂದರೆ ಕೇವಲ ಒಂದು ಮಸಾಲೆ ಅಂತ ಮಾತ್ರ ಭಾವಿಸಬೇಡಿ. ನಮ್ಮ ಅಜ್ಜಿಯವರ ಕಾಲದಿಂದಲೂ ಇದನ್ನು ಔಷಧವಾಗಿ ಬಳಸೋದು, ಚರ್ಮದ ಆರೈಕೆ, ಹಬ್ಬದ ಸಮಯದಲ್ಲಿ ಪೂಜೆಗೆ ಸಹ ಉಪಯೋಗಿಸುವ ಪರಂಪರೆ ಇದೆ. ಆದ್ರೆ ಇಷ್ಟೊಂದು ಉಪಯೋಗವಿರುವ ಈ ಅರಿಶಿಣಕ್ಕೂ ಈಗ ಒಂದು ದೊಡ್ಡ ಸಮಸ್ಯೆ ಇದೆ – ಕಲಬೆರಕೆ!
ಮಾರುಕಟ್ಟೆಯಲ್ಲಿ ಸಿಗುವ ಅರಿಶಿನ ಪುಡಿಯ ಶುದ್ಧತೆ ಬಗ್ಗೆ ಬಹಳಷ್ಟು ಅನುಮಾನಗಳಿವೆ. ಕೆಲವೊಮ್ಮೆ ಪಿಷ್ಟ, ಕೃತಕ ಬಣ್ಣ, ಕಾನ್ಸರ್ ಉಂಟುಮಾಡಬಹುದಾದ ರಾಸಾಯನಿಕಗಳು ಸಹ ಸೇರಿಸಿ ಮಾರಲಾಗುತ್ತೆ. ಈ ಕಾರಣಕ್ಕಾಗಿ ನಾವೇ ಮನೆಯಲ್ಲಿ ಸುಲಭವಾಗಿ ಇದನ್ನು ಪರೀಕ್ಷಿಸಬಹುದಾದ ಕೆಲವು ವಿಧಾನಗಳಿವೆ.
ನೀರಿನಲ್ಲಿ ಕರಗುವ ಪರೀಕ್ಷೆ
ಒಂದು ಲೋಟ ಸಾಮಾನ್ಯ ನೀರಿನಲ್ಲಿ ಒಂದು ಟೀ ಚಮಚ ಅರಿಶಿನ ಹಾಕಿ ಬೆರೆಸಿ. ಶುದ್ಧ ಅರಿಶಿನವು ನೀರಿನಲ್ಲಿ ಕರಗದೆ ತಳದಲ್ಲಿ ಕುಳಿತುಕೊಳ್ಳುತ್ತದೆ. ಆದರೆ, ಕಲಬೆರಕೆಗೊಳಗಾದ ಅರಿಶಿನ ಪುಡಿ ನೀರಿನಲ್ಲಿ ಕರಗಿ ಹಳದಿ ಬಣ್ಣದ ದ್ರಾವಣ ಉಳಿಯುತ್ತದೆ.
ಬಟ್ಟೆ ಪರೀಕ್ಷೆ
ಬಿಳಿ ಬಟ್ಟೆಯ ಮೇಲೆ ಸ್ವಲ್ಪ ಅರಿಶಿಣ ಉಜ್ಜಿ, ನಂತರ ನೀರಿನಲ್ಲಿ ತೊಳೆಯಿರಿ. ಶುದ್ಧ ಅರಿಶಿಣ ನೈಸರ್ಗಿಕ ಬಣ್ಣವನ್ನು ಬಿಟ್ಟು ಹೋಗುತ್ತದೆ. ಆದರೆ, ಸಿಂಥೆಟಿಕ್ ಬಣ್ಣಗಳಿದ್ದರೆ ಬಟ್ಟೆ ಮೇಲೆ ಬಣ್ಣ ತೀವ್ರವಾಗಿ ಉಳಿಯಬಹುದು.
ವಿನೆಗರ್ ಪರೀಕ್ಷೆ
ಒಂದು ಚಮಚ ಅರಿಶಿಣ ಪುಡಿಗೆ ಕೆಲವು ಹನಿ ವಿನೆಗರ್ ಹಾಕಿ. ಬಣ್ಣ ಬದಲಾಗದಿದ್ದರೆ ಅದು ಶುದ್ಧವಾಗಿರುತ್ತದೆ. ಬಣ್ಣ ಬದಲಾಗಿದ್ರೆ, ಅದರಲ್ಲಿ ಸಿಂಥೆಟಿಕ್ ಬಣ್ಣಗಳಿರುವ ಸೂಚನೆ.
ಬಿಸಿ ನೀರಿನ ಪರೀಕ್ಷೆ
ಬಿಸಿ ನೀರಿನಲ್ಲಿ ಅರಿಶಿಣ ಹಾಕಿ ಬೆರೆಸಿ. ಶುದ್ಧ ಅರಿಶಿಣ ತಳದಲ್ಲಿ ಉಳಿಯುತ್ತದೆ, ಆದರೆ ಪಿಷ್ಟ ಅಥವಾ ಕಲಬೆರಕೆಯ ಪುಡಿ ಕರಗಿ ಬಿಡುತ್ತದೆ.
ಬೆಂಕಿ ಪರೀಕ್ಷೆ
ಅರಿಶಿಣ ಪುಡಿಯನ್ನು ಚಮಚದಲ್ಲಿ ಹಾಕಿ ಬೆಂಕಿಗೆ ಇಡಿ. ಶುದ್ಧ ಅರಿಶಿಣ ನಿಧಾನವಾಗಿ ಸುಡುತ್ತದೆ ಮತ್ತು ನೈಸರ್ಗಿಕ ಪರಿಮಳ ಬಿಡುತ್ತದೆ. ಪಿಷ್ಟ ಅಥವಾ ಪ್ಲಾಸ್ಟಿಕ್ ಕಲಬೆರಕೆ ಇದ್ದರೆ ದುರ್ವಾಸನೆ ಬರುತ್ತದೆ.
ರುಚಿ ಪರೀಕ್ಷೆ
ಒಂದು ಚಿಟಿಕೆ ಅರಿಶಿಣ ಬಾಯಿಗೆ ಹಾಕಿ. ಸ್ವಲ್ಪ ಕಹಿ, earthy flavor ಬಂದರೆ ಶುದ್ಧ. ಸಿಹಿಯಾಗಿದ್ರೆ ಅಥವಾ ಉಪ್ಪು, ಹುಳಿ ಬಂದರೆ ಕಲಬೆರಕೆ ಇರಬಹುದು.
ಪೇಪರ್ ಪರೀಕ್ಷೆ
ಬಿಳಿ ಹಾಳೆಯಲ್ಲಿ ಅರಿಶಿಣ ಪುಡಿಯನ್ನು ಒತ್ತಿ, 5 ನಿಮಿಷ ಬಿಟ್ಟು ನೋಡಿ. ಶುದ್ಧ ಅರಿಶಿಣ ಗಾಢ ಹಳದಿ ಕಲೆ ಬಿಟ್ಟು ಹೋಗುತ್ತದೆ. ಕಲಬೆರಕೆ ಇದ್ದರೆ ಹಳದಿ ಚಿಟಿಕೆ ಅಥವಾ ಶೈನ್ ಬರುತ್ತದೆ.