‘ಮದುವೆಯಲ್ಲಿ ಲಕ್ಷ ಲಕ್ಷ ಹಣ ತೆಗೆದುಕೊಂಡಿದ್ದಾರೆ…’ ‘ವಿಚ್ಛೇದನದ ನಂತರ ಜೀವನಾಂಶವೂ ಬೇಕಂತೆ!’ ಇಂಥ ಮಾತುಗಳು ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಲೂ ಕೇಳಿಬರೋದು ಸಾಮಾನ್ಯ. ಕೆಲವರು ತಕ್ಷಣವೇ ಪ್ರಶ್ನೆ ಮಾಡ್ತಾರೆ, “ವರದಕ್ಷಿಣೆ ಕೊಡುವುದೂ, ಪಡೆಯುವದೂ ಕಾನೂನಿಗೆ ವಿರುದ್ಧ ಅಂತಾರೆ… ಆದರೆ ಬಳಿಕ ಹೆಂಡತಿಗೆ ಗಂಡನಿಂದ ಜೀವನಾಂಶ ಕೇಳೋದು ಹೇಗೆ ನ್ಯಾಯಸಮ್ಮತ?” — ಈ ಪ್ರಶ್ನೆ ನ್ಯಾಯಯುತವಾಗಿಯೇ ಇದೆ. ಆದರೆ, ಇವು ಎರಡೂ ವಿಭಿನ್ನ ವಿಷಯಗಳಾಗಿವೆ. ಈ ಕುರಿತು ಭಾರತೀಯ ಕಾನೂನು ಏನು ಹೇಳುತ್ತೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳೋಣ.
ವರದಕ್ಷಿಣೆ – ಕಾನೂನುಬದ್ಧ ಅಪರಾಧ
ವರದಕ್ಷಿಣೆ ಕೇಳೋದು, ಕೊಡುವುದು ಎರಡೂ ಭಾರತೀಯ ಕಾನೂನಿನ ಪ್ರಕಾರ ಅಪರಾಧ. 1961 ರಲ್ಲಿ ಜಾರಿಗೆ ಬಂದ ವರದಕ್ಷಿಣೆ ನಿಷೇಧ ಕಾಯ್ದೆಯಡಿ, ಯಾರೇ ಆಗಲಿ – ಗಂಡ ಅಥವಾ ಅವನ ಕುಟುಂಬದಿಂದ ವರದಕ್ಷಿಣೆ ಬೇಡಿಕೆ ಬಂದರೆ, ಕಾನೂನು ಕ್ರಮ ಕೈಗೆತ್ತಿಕೊಳ್ಳಬಹುದಾಗಿದೆ. ಇದರೊಂದಿಗೆ IPC ಸೆಕ್ಷನ್ 304B ಪ್ರಕಾರ, ಮದುವೆಯ 7 ವರ್ಷಗಳ ಒಳಗೆ ಮಹಿಳೆ ಸಾವನ್ನಪ್ಪಿದರೆ ಮತ್ತು ವರದಕ್ಷಿಣೆ ಕಿರುಕುಳ ಎಂದು ಸಾಬೀತಾದರೆ, ಅದು ‘ಡೌರಿ ಡೆತ್’ (Dowry Death) ಆಗಿ ಪರಿಗಣಿಸಲಾಗುತ್ತದೆ. ಆರೋಪಿಗಳಿಗೆ 7 ವರ್ಷದಿಂದ ಹಿಡಿದು ಜೀವಾವಧಿಯವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
2024 ರ NCRB ವರದಿ ಪ್ರಕಾರ, ಒಂದೇ ವರ್ಷದಲ್ಲಿ 7,045 ಮಹಿಳೆಯರು ವರದಕ್ಷಿಣೆ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. 2017-2021ರ ನಡುವೆ ಈ ಪಿಡುಗು 35,000ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ಈ ಅಂಕಿಅಂಶಗಳು ಕಾನೂನು ಗಟ್ಟಿಯಾಗಿದ್ದರು ಸಮಾಜದಲ್ಲಿ ವರದಕ್ಷಿಣೆಯ ಪಾಶ ಇನ್ನೂ ಶೇಷವಿದೆ ಎಂಬುದನ್ನು ತೋರಿಸುತ್ತವೆ.
ಜೀವನಾಂಶ – ಕಾನೂನುಬದ್ಧ ಹಕ್ಕು
ವಿಚ್ಛೇದನ (ಡಿವೋರ್ಸ್) ಆದ ಬಳಿಕ, ಹೆಂಡತಿಗೆ ಜೀವನ ಸಾಗಿಸಲು ಆರ್ಥಿಕ ನೆರವು ನೀಡುವುದು ಕಾನೂನುಬದ್ಧ. ಇದನ್ನು “Maintenance” ಅಥವಾ “Alimony” ಎನ್ನುತ್ತಾರೆ. ಮಹಿಳೆಯರು ಮದುವೆಯ ಬಳಿಕ ತಮ್ಮ ಉದ್ಯೋಗ ತ್ಯಜಿಸಿ ಕುಟುಂಬದ ಜವಾಬ್ದಾರಿ ಹೊತ್ತಿದ್ದರೆ, ವಿಚ್ಛೇದನ ನಂತರ ಜೀವನ ನಡೆಸಲು ಆರ್ಥಿಕ ಸಹಾಯ ನೀಡಬೇಕು ಎಂಬುದೇ ಇದರ ಉದ್ದೇಶ.
ಭಾರತೀಯ ಕಾನೂನು CrPC ಸೆಕ್ಷನ್ 125 ಅಡಿಯಲ್ಲಿ, ಗಂಡನು ತನ್ನ ಪತ್ನಿಗೆ (ಅಥವಾ ಪತ್ನಿಯು ಪತಿಗೆ – ವಿಶೇಷ ಸಂದರ್ಭಗಳಲ್ಲಿ) ಜೀವನಾಂಶ ನೀಡಬೇಕೆಂದು ನ್ಯಾಯಾಲಯ ಆಜ್ಞೆ ನೀಡಬಹುದು. ಇಷ್ಟೇ ಅಲ್ಲ, 2005 ರ ಕೌಟುಂಬಿಕ ಹಿಂಸಾಚಾರ ತಡೆ ಕಾಯ್ದೆಯಡಿಯೂ ಹೆಂಗಸಿಗೆ ಈ ಹಕ್ಕು ದೊರೆಯುತ್ತದೆ. ಈ ಜೀವನಾಂಶದಲ್ಲಿ ವಸತಿ, ಆಹಾರ, ಮಕ್ಕಳ ವಿದ್ಯಾಭ್ಯಾಸ ಮೊದಲಾದ ಅಗತ್ಯ ಖರ್ಚುಗಳು ಒಳಗೊಂಡಿರುತ್ತವೆ.
ವ್ಯತ್ಯಾಸವೇನು?
ವರದಕ್ಷಿಣೆ ಒಂದು ಅಪರಾಧಾತ್ಮಕ ಬೇಡಿಕೆ, ಮದುವೆಗೆ ಮೊದಲು ಅಥವಾ ನಂತರ ಹಣ/ಬಂಗಾರ/ವಸ್ತುಗಳನ್ನು ಒತ್ತಾಯದಿಂದ ತೆಗೆದುಕೊಳ್ಳುವುದು.
ಜೀವನಾಂಶವು ಸಹಾನುಭೂತಿ ಮತ್ತು ಹಕ್ಕಿಗೆ ಸಂಬಂಧಿಸಿದ ಸೂಕ್ತ ವ್ಯವಸ್ಥೆ, ವಿಚ್ಛೇದನದ ನಂತರ ಆರ್ಥಿಕ ಸ್ಥಿರತೆಗಾಗಿ.
ಹೆಚ್ಚುವರಿಯಾಗಿ ಹೆಂಡತಿ ಕೆಲಸ ಬಿಟ್ಟು ಮನೆಯ ಹೊಣೆ ಹೊತ್ತಿದ್ದರೆ, ವಿಚ್ಛೇದನವಾದ ಮೇಲೆ ಆಕೆ ರಸ್ತೆಗೆ ಬಿದ್ದರೆ ನ್ಯಾಯವಲ್ಲ. ಅಂಥವರಿಗಾಗಿ ಈ ಕಾನೂನು ಇದೆ. ಆದರೆ, ಹೆಂಡತಿಗೆ ಸ್ವತಂತ್ರ ಆದಾಯ ಇದ್ದರೆ ಅಥವಾ ಗಂಡ ಆರ್ಥಿಕವಾಗಿ ದುರ್ಬಲನಾದರೆ, ನ್ಯಾಯಾಲಯ ಪರಿಸ್ಥಿತಿಗೆ ತಕ್ಕಂತೆ ತೀರ್ಮಾನ ನೀಡುತ್ತದೆ.
ವರದಕ್ಷಿಣೆ ಮತ್ತು ಜೀವನಾಂಶ ಎರಡೂ ನಡುವಿನ ವ್ಯತ್ಯಾಸವನ್ನು ಅರಿತರೆ, ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗುತ್ತದೆ. ಒಂದು ಕಾನೂನುಬದ್ಧ ಅಪರಾಧ, ಮತ್ತೊಂದು ಕಾನೂನುಬದ್ಧ ಹಕ್ಕು. ಮದುವೆ ಎಂಬ ಭದ್ರತೆಯ ಬಂಧ ಚೂರಾದಾಗ, ಬಿಕ್ಕಟ್ಟಿನ ನಡುವೆ ನಿರ್ದೋಷಿಯಾದವಳಿಗೆ (ಅಥವಾ ನಿರ್ದೋಷಿ ಎನಿಸಿದವರಿಗೆ) ನ್ಯಾಯ ಸಿಗಬೇಕು ಎಂಬುದೇ ಕಾನೂನುಗಳ ಉದ್ದೇಶ.