ಮಕ್ಕಳಿಗೆ ಆರೋಗ್ಯಕರ ಆಹಾರ ತಿನ್ನಿಸುವುದು ಅಮ್ಮಂದಿರ ದೊಡ್ಡ ಸವಾಲು. ಪ್ರತಿದಿನ ತರಕಾರಿ ತಿನ್ನೋಕೆ ಹಠ ಮಾಡೋ ಮಕ್ಕಳಿಗೆ ಗುಪ್ತವಾಗಿ ಪೋಷಕಾಂಶ ನೀಡುವುದು ತುಂಬಾ ಕಷ್ಟ. ಈ ಸಮಸ್ಯೆಗೆ ಸರಳ ಪರಿಹಾರವಾಗಿ, ಈ ಚಿಕನ್ ಟಾಕೋ. ಕೇವಲ 20 ನಿಮಿಷಗಳಲ್ಲಿ ಮಾಡಬಹುದಾದ ಈ ಆಹಾರ ಮಕ್ಕಳ ರುಚಿಗೆ ತಕ್ಕಂತೆಯೂ, ಆರೋಗ್ಯಕ್ಕೂ ಸೂಕ್ತವೂ ಆಗಿದೆ.
ಬೇಕಾಗುವ ಪದಾರ್ಥಗಳು:
ಬೇಯಿಸಿದ ಚಿಕನ್ ಬ್ರೆಸ್ಟ್ – 4 (ಮೂಳೆ ರಹಿತ)
ಹಸಿರು ಮೆಣಸಿನಕಾಯಿ – 1
ಜೇನುತುಪ್ಪ – ಕಾಲು ಕಪ್
ಹುಳಿ ಕ್ರೀಮ್ – 1 ಕಪ್
ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್
ಗಟ್ಟಿಯಾದ ಟಾಕೋ ಶೆಲ್‌ಗಳು – 10
ಫ್ರೈ ಮಾಡಿದ ಬೀನ್ಸ್ – ಮುಕ್ಕಾಲು ಕಪ್ ಜೊತೆಗೆ (ಸೌತೆಕಾಯಿ, ಕುಂಬಳಕಾಯಿ, ಪಾಲಕ್ ಸೊಪ್ಪು, ಕ್ಯಾಬೇಜ್, ಹುರುಳಿ ಹೀಗೆ ಹಲವು ಬೇಯಿಸಿದ ತರಕಾರಿಗಳನ್ನೂ ನೀವಿದರಲ್ಲಿ ಸೇರಿಸಬಹುದು)
ತುರಿದ ಚೀಸ್ – ಅರ್ಧ ಕಪ್
ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
ಸಣ್ಣಗೆ ಹೆಚ್ಚಿದ ಟೊಮೆಟೊ – 2
ಸಣ್ಣಗೆ ಕತ್ತರಿಸಿದ ಆವಕಾಡೋ – ೧
ಮಾಡುವ ವಿಧಾನ:
ಮೊದಲು ಓವನ್ ಅನ್ನು 350 ಡಿಗ್ರಿಗೆ ಪೂರ್ವ ತಾಪಮಾನಕ್ಕೆ ಕಾಯಿಸಿ. ನಂತರ ಚಿಕನ್ ಬ್ರೆಸ್ಟ್ ಅನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಮಾಡಿಕೊಳ್ಳಿ. ಒಂದು ಬೌಲ್‌ನಲ್ಲಿ ಚಿಕನ್, ಮೆಣಸಿನಕಾಯಿ, ಜೇನುತುಪ್ಪ, ಹುಳಿ ಕ್ರೀಮ್ ಮತ್ತು ಕರಿ ಮೆಣಸಿನಪುಡಿಯನ್ನು ಚೆನ್ನಾಗಿ ಮಿಕ್ಸ್ ಮಾಡಿ.
ಬೇಕಿಂಗ್ ಪ್ಯಾನ್‌ನಲ್ಲಿ ಟಾಕೋ ಶೆಲ್‌ಗಳನ್ನು ಸರಿಹೊಂದಿಸಿ. ಪ್ರತಿ ಶೆಲ್‌ನಲ್ಲಿ ಒಂದು ಟೀಸ್ಪೂನ್ ಬೇಯಿಸಿದ ತರಕಾರಿಗಳ ಮಿಶ್ರಣವನ್ನು ಹಾಕಿ. ಅದರ ಮೇಲೆಗೆ ಚಿಕನ್ ಮಿಶ್ರಣವನ್ನು ಹಾಕಿ, ನಂತರ ಚೀಸ್ ಹಾಕಿ. ಪ್ಯಾನ್ ಅನ್ನು ಓವನ್ ಗೆ ಇಟ್ಟು 10 ನಿಮಿಷಗಳವರೆಗೆ ಬೇಯಿಸಿ. ನಂತರ ಟಾಕೋಗಳ ಮೇಲೆ ಇನ್ನಷ್ಟು ಹುಳಿ ಕ್ರೀಮ್, ಟೊಮೆಟೋ, ಕೊತ್ತಂಬರಿ ಮತ್ತು ಆವಕಾಡೋ ಹಾಕಿ.
ಮಕ್ಕಳಿಗೆ ಬಿಸಿಬಿಸಿಯಾಗಿ ನೀಡಿದರೆ ಅವರು ಇದನ್ನು ತಿನ್ನದೇ ಬಿಡಲ್ಲ. ರುಚಿಗೂ ಪೋಷಕಾಂಶಕ್ಕೂ ಈ ಟಾಕೋಗೆ ಫುಲ್ ಮಾರ್ಕ್ಸ್.