ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿ ಇತಿಹಾಸ ಸೃಷ್ಟಿಸಿರುವ ಭಾರತೀಯ ಗಗನಯಾತ್ರಿ, ಐಎಎಫ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್ ಆಗಿದ್ದು, ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಬಂದಿಳಿದಿದ್ದಾರೆ.
ಸೋಮವಾರ (ಜು.14) ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಡ್ರ್ಯಾಗನ್ ಕ್ಯಾಪ್ಸುಲ್ ಪ್ರವೇಶಿಸಿ, ಸಂಜೆ 4:35ಕ್ಕೆ ಅನ್ಡಾಕಿಂಗ್ (ಬೇರ್ಪಡಿಸುವಿಕೆ) ಪ್ರಕ್ರಿಯೆ ಯಶಸ್ವಿಯಾಗಿತ್ತು. ಒಟ್ಟು 22.5 ಗಂಟೆಗಳ ಪ್ರಯಾಣ ಬಳಿಕ ಇಂದು ಮಧ್ಯಾಹ್ನ 3ಕ್ಕೆ ಪೆಸಿಫಿಕ್ ಮಹಾಸಾಗರದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಸ್ಪ್ಲ್ಯಾಷ್ ಡೌನ್ ಯಶಸ್ವಿಯಾಗಿದ್ದು, ಸುರಕ್ಷಿತವಾಗಿ ಶುಭಾಂಶು ಶುಕ್ಲಾ ಹಾಗೂ ಇನ್ನುಳಿದ ಮೂವರು ಗಗನಯಾತ್ರಿಗಳು ಭೂಮಿಗೆ ಬಂದಿಳಿದಿದ್ದಾರೆ.
ಕ್ಯಾಪ್ಸುಲ್ ಲ್ಯಾಂಡ್ ಆಗುವ ಮುನ್ನ ಅದರ ವೇಗ ನಿಯಂತ್ರಿಸಿ ಪ್ಯಾರಾಚೂಟ್ ಮೂಲಕ ಸಮುದ್ರದಲ್ಲಿ ಸ್ಪ್ಲ್ಯಾಷ್ ಡೌನ್ ಮಾಡಲಾಯಿತು. ಕ್ಯಾಪ್ಸುಲ್ ಲ್ಯಾಂಡ್ ಆಗಿ 2 ಗಂಟೆಗಳ ಅದನ್ನು ಓಪನ್ ಮಾಡುವುದಿಲ್ಲ. ಆನಂತರ ಸ್ಟ್ರೇಚ್ಚರ್ನಲ್ಲಿ ಮಲಗಿಸಿ ಕರೆತಂದು ವೈದ್ಯಕೀಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗುತ್ತದೆ. ಗಗನಯಾತ್ರಿಗಳಿಗೆ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು 7 ದಿನಗಳ ವಿಶ್ರಾಂತಿಯ ಅವಶ್ಯಕತೆಯಿರುತ್ತದೆ.
ಜೂ.25ರಂದು ಆಕ್ಸಿಯಂ-4 ಮಿಷನ್ ಮೂಲಕ ಭಾರತದ ಶುಭಾಂಶು ಶುಕ್ಲಾ, ಅಮೆರಿಕ ಮಹಿಳಾ ಗಗನಯಾತ್ರಿ ಪೆಗ್ಗಿ ವಿಟ್ಸನ್, ಹಂಗೇರಿಯ ಟಿಬೋರ್ ಕಾಪು ಹಾಗೂ ಪೋಲೆಂಡ್ ಗಗನಯಾತ್ರಿ ಸ್ಲಾವೋಸ್ಜ್ ಉಜ್ನಾನ್ಸ್ಕಿ ನಾಲ್ವರು ಗಗನಯಾತ್ರಿಗಳು ಅಂತರಿಕ್ಷ ಯಾನಕ್ಕೆ ತೆರಳಿದ್ದರು. ಬಾಹ್ಯಾಕಾಶದಲ್ಲಿ 18 ದಿನಗಳ ಕಾಲ ಉಳಿದು ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ಮಾಡಿದ್ದು, ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿವೆ.