ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮಿರ್ ಖಾನ್ ಅಭಿನಯದ ಸ್ಪೋರ್ಟ್ಸ್-ಡ್ರಾಮಾ ಸಿನಿಮಾ ‘ಸೀತಾರೆ ಜಮೀನ್ ಪರ್’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 23 ದಿನಗಳಾದರೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಶನಿವಾರ ದೇಶಾದ್ಯಂತ ಈ ಚಿತ್ರವು 2.5 ಕೋಟಿ ಗಳಿಸಿದ್ದು, ಇದುವರೆಗೆ ಒಟ್ಟು 157.75 ಕೋಟಿ ನಿವ್ವಳ ಕಲೆಕ್ಷನ್ ತಲುಪಿದೆ. ಚಿತ್ರದ ಕಲೆಕ್ಷನ್ ಹೋರಾಟ ನೋಡಿದ್ರೆ, ಬಿಡುಗಡೆಯಾದ ಹತ್ತಿರ ಹತ್ತಿರ 1 ತಿಂಗಳಾದರೂ ಪ್ರೇಕ್ಷಕರ ಪ್ರೀತಿಗೆ ಕಡಿಮೆಯಿಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಜಂಪ್:
ಜುಲೈ 12ರ ಶನಿವಾರಕ್ಕೆ ಹೋಲಿಸಿದರೆ ಹಿಂದಿನ ದಿನ ಫ್ರೈಡೇನಲ್ಲಿ ಕೇವಲ 14.64% ಆಕ್ಯುಪೆನ್ಸಿ ಇದ್ದಿದ್ದರೂ ಶನಿವಾರ ಇದೇ ಚಿತ್ರವು 40.26% ಆಕ್ಯುಪೆನ್ಸಿಯನ್ನು ದಾಖಲಿಸಿದೆ. ಅಂದರೆ ಶನಿವಾರದಂದು 177.78% ಏರಿಕೆ ಕಂಡಿದೆ. ಈ ಬೆಳವಣಿಗೆಯು ಸ್ಪಷ್ಟವಾಗಿ ಚಿತ್ರದ ಶಕ್ತಿಯನ್ನೂ, ಪ್ರೇಕ್ಷಕರ ಮೆಚ್ಚುಗೆಗೇನೂ ಕೊರತೆಯಿಲ್ಲ ಅನ್ನೋದು ತಿಳಿಸುತ್ತಿದೆ.
ವಿದೇಶದಲ್ಲಿಯೂ ಧೂಳೆಬ್ಬಿಸಿದ ಸಿನಿಮಾ:
ಜೂನ್ 20ರಂದು ಬಿಡುಗಡೆಯಾದ ಈ ಸಿನಿಮಾ, 21 ದಿನಗಳ ಒಳಗಾಗಿ ಜಾಗತಿಕ ಮಟ್ಟದಲ್ಲಿ 239.50 ಕೋಟಿ ಕಲೆಕ್ಷನ್ ಮಾಡಿದ್ದು, ಇದರಲ್ಲಿ 54 ಕೋಟಿ ವಿದೇಶಿ ಮಾರುಕಟ್ಟೆಯಿಂದ ಬಂದಿದೆ. ಈ ಚಿತ್ರವು 2018ರ ಸ್ಪ್ಯಾನಿಷ್ ಹಿಟ್ ‘ಚಾಂಪಿಯನ್ಸ್’ ನ ಆಧಾರಿತ ಸಿನಿಮಾ ಆಗಿದೆ.
ಆಮಿರ್ ಖಾನ್ ಹಾಗೂ ಜೆನಿಲಿಯಾ ದೇಶ್‌ಮುಖ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅರೋಶ್ ದತ್ತಾ, ವೇದಾಂತ್ ಶರ್ಮಾ, ಸಂವಿತ್ ದೇಸಾಯಿ, ಬ್ರಿಜೇಂದ್ರ ಕಲಾ ಮೊದಲಾದ ಕಲಾವಿದರು ತಮ್ಮ ನಟನೆಗಳಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.
80 ಕೋಟಿ ಬಜೆಟ್‌ನಲ್ಲಿ ನಿರ್ಮಿತವಾಗಿರುವ ಈ ಸಿನಿಮಾ ಈಗಾಗಲೇ 2025ರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪೈಕಿ ಆರನೇ ಸ್ಥಾನದಲ್ಲಿದೆ ಎಂದು IMDb ಡೇಟಾ ತಿಳಿಸಿದೆ.