ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಚೀನಾ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ.
ಶಾಂಘೈ ಸಹಕಾರ ಸಂಸ್ಥೆಯ (SCO) ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಜೈಶಂಕರ್ ಚೀನಾಕ್ಕೆ ಹೋಗಿದ್ದರು. ಈ ಸಮಯದಲ್ಲಿ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಜೈಶಂಕರ್ ಹೇಳಿದರು.
ಭಾರತದ ರಾಯಭಾರ ಕಚೇರಿ (ಬೀಜಿಂಗ್, ಚೀನಾ) ಸಭೆಯ ವೀಡಿಯೊವನ್ನು ಬಿಡುಗಡೆ ಮಾಡಿದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾದ ನಂತರ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಎಸ್ ಜೈಶಂಕರ್ ಅವರು ರಾಷ್ಟ್ರಪತಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವನ್ನು ಅವರಿಗೆ ತಲುಪಿಸಿದ್ದಾರೆ.
ಇದು ಭಾರತ-ಚೀನಾ ಸಂಬಂಧಗಳನ್ನು ಸುಧಾರಿಸಲು ಮತ್ತು ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ. 2020 ರಲ್ಲಿ ಗಾಲ್ವಾನ್ ಹಿಂಸಾಚಾರದ ನಂತರ ಜೈಶಂಕರ್ ಅವರ ಮೊದಲ ಚೀನಾ ಭೇಟಿ ಇದಾಗಿದೆ.
ಮೂಲಗಳ ಪ್ರಕಾರ, ಭಾರತ ಮತ್ತು ಚೀನಾ ನಡುವಿನ ಮುಕ್ತ ಸಂವಾದದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಗಾಲ್ವಾನ್ ಹಿಂಸಾಚಾರದ ನಂತರ, ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹಳಸಿತ್ತು. ಆದರೆ ಕಳೆದ ವರ್ಷ ಕಜಾನ್‌ನಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಷಿ ಭೇಟಿಯ ನಂತರ, ಸಂಬಂಧ ಉತ್ತಮವಾಗಿದೆ. ಎರಡೂ ದೇಶಗಳ ಹೆಜ್ಜೆಗಳು ಈಗ ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ. ಜೈಶಂಕರ್ ಅವರ ಈ ಭೇಟಿಯು ಪರಸ್ಪರ ನಂಬಿಕೆಯನ್ನು ಪುನಃಸ್ಥಾಪಿಸಲು ಮತ್ತು ಗಡಿ ವಿವಾದವನ್ನು ಪರಿಹರಿಸಲು ಎರಡೂ ದೇಶಗಳಿಗೆ ಒಂದು ಪ್ರಮುಖ ಹೆಜ್ಜೆಯಾಗಿದೆ.
ಒಪ್ಪಂದದ ನಂತರ, ಭಾರತ ಮತ್ತು ಚೀನಾ ಪರಸ್ಪರ ಸಂವಾದದ ಮಾರ್ಗಗಳನ್ನು ಮತ್ತೆ ತೆರೆಯಲು ನಿರ್ಧರಿಸಿವೆ. ಗಾಲ್ವಾನ್ ಸಂಘರ್ಷದ ನಂತರ ಎರಡೂ ದೇಶಗಳ ನಡುವಿನ ಮಾತುಕತೆ ಸ್ಥಗಿತಗೊಂಡಿತ್ತು. ಕಳೆದ ಒಂಬತ್ತು ತಿಂಗಳಲ್ಲಿ, ನಮ್ಮ ಸಂಬಂಧಗಳನ್ನು ಸಾಮಾನ್ಯಗೊಳಿಸುವಲ್ಲಿ ನಾವು ಉತ್ತಮ ಪ್ರಗತಿಯನ್ನು ಸಾಧಿಸಿದ್ದೇವೆ.ಈಗ ನಾವು ಗಡಿಗೆ ಸಂಬಂಧಿಸಿದ ಇತರ ಅಂಶಗಳತ್ತ ಗಮನಹರಿಸಬೇಕು, ವಿಶೇಷವಾಗಿ ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕು ಎಂದು ಜೈಶಂಕರ್ ಹೇಳಿದರು.