ತುಪ್ಪವನ್ನು ಸಾಮಾನ್ಯವಾಗಿ ಆಹಾರದ ಭಾಗವಾಗಿ ಮಾತ್ರ ನೋಡಲಾಗುತ್ತದೆ. ಆದರೆ ಇದು ದೇಹದ ಹೊರಾಂಗಗಳಿಗೂ, ವಿಶೇಷವಾಗಿ ಚರ್ಮದ ಆರೋಗ್ಯಕ್ಕೂ ಮಹತ್ವದ ಪಾತ್ರ ವಹಿಸುತ್ತದೆ ಅನ್ನೋದು ನಿಮಗೆ ಗೊತ್ತಿದ್ಯಾ? ಹೌದು, ರಾತ್ರಿ ಮಲಗುವ ಮುನ್ನ ನಿಮ್ಮ ಮುಖಕ್ಕೆ ತುಪ್ಪ ಹಚ್ಚಿದರೆ ನಿಜಕ್ಕೂ ಅನೇಕ ಪ್ರಯೋಜನಗಳಿವೆ.
ಚರ್ಮಕ್ಕೆ ಆಳವಾದ ಪೋಷಣೆ
ತುಪ್ಪದಲ್ಲಿ ಉತ್ತಮವಾದ ಕೊಬ್ಬಿನಾಮ್ಲಗಳು ಇವೆ. ಇದು ಚರ್ಮದ ಆಂತರಿಕ ಪದರಗಳಿಗೆ ತಲುಪುವ ಮೂಲಕ ದೀರ್ಘಕಾಲದ ಹೈಡ್ರೇಶನ್ ನೀಡುತ್ತದೆ. ಇದರಿಂದಾಗಿ ಒಣಚರ್ಮವಿರುವವರಿಗೆ ತುಪ್ಪ ನಿಜಕ್ಕೂ ಉತ್ತಮ ಆಯ್ಕೆಯಾಗುತ್ತದೆ.
ನೈಸರ್ಗಿಕ ಹೊಳಪು ಹೆಚ್ಚಿಸುತ್ತದೆ
ತುಪ್ಪದಲ್ಲಿ ವಿಟಮಿನ್ ಎ, ಇ, ಡಿ, ಕೆ ಇತ್ಯಾದಿ ಮುಖ್ಯ ಪೌಷ್ಟಿಕಾಂಶಗಳು ಇರುವುದರಿಂದ, ನಿಮ್ಮ ಚರ್ಮದ ಆರೋಗ್ಯ ಸುಧಾರಣೆಗಾಗಿಯೇ ಇವು ಉಪಯುಕ್ತ. ಈ ಪೋಷಕಾಂಶಗಳು ನಿಮ್ಮ ಚರ್ಮವನ್ನು ಒಳಗಿನಿಂದ ಪೋಷಿಸುವ ಮೂಲಕ ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತವೆ.
ಮುಖದ ಕಲೆಗಳಿಗೆ ಉತ್ತಮ
ತುಪ್ಪವು ಆಂಟಿಆಕ್ಸಿಡೆಂಟ್ ಅಂಶಗಳಿಂದ ಕೂಡಿದ್ದು, ಮುಕ್ತ ರಾಡಿಕಲ್‌ಗಳಿಂದ ಚರ್ಮಕ್ಕೆ ಆಗಬಹುದಾದ ಹಾನಿಯಿಂದ ರಕ್ಷಿಸುತ್ತದೆ. ಇದು ಕಲೆಗಳು, ಮೊಡವೆ ಮತ್ತು ಇತರ ಅನಾವಶ್ಯಕ ಚರ್ಮದ ಸಮಸ್ಯೆಗಳನ್ನು ದೂರಮಾಡಲು ಸಹಕಾರಿ. ಹೀಗಾಗಿ ನಿಯಮಿತವಾಗಿ ತುಪ್ಪ ಹಚ್ಚಿದರೆ, ಮುಖದ ಬಣ್ಣ ಸಹ ಸಮತೋಲನವಾಗಿರುತ್ತದೆ.
ತುಟಿಗಳ ಆರೈಕೆಗೆ ಶ್ರೇಷ್ಠ ಪರಿಹಾರ
ಬಿಸಿಲು ಅಥವಾ ಚಳಿಯಿಂದಾಗಿ ಬಿರುಕು ಬಿಟ್ಟ ತುಟಿಗಳಿಗೆ ತುಪ್ಪ ಅತ್ಯುತ್ತಮ ಆಯ್ಕೆ. ಪ್ರತಿದಿನ ರಾತ್ರಿ ತುಟಿಗೆ ತುಪ್ಪ ಹಚ್ಚಿದರೆ, ತುಟಿಗಳ ಸತ್ತ ಚರ್ಮ ಹೋಗಿ, ಹೊಸ ಚರ್ಮ ಬೆಳೆಯುತ್ತದೆ. ತುಟಿಗಳು ಮೃದು, ಹೊಳಪಾಗಿರುತ್ತವೆ ಮತ್ತು ಒಡೆದುಹೋಗುವ ಸಮಸ್ಯೆ ತಡೆಯಬಹುದು.