ಅತ್ಯಂತ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಗಳಿಸಿದ ಮಿಚೆಲ್ ಸ್ಟಾರ್ಕ್! 100ನೇ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಸಾಧನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಜುಲೈ 15, 2025ರಂದು ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅವರು ಕೇವಲ 9 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿ ದಾಖಲೆ ಬರೆದರು. ಕೇವಲ 15 ಎಸೆತಗಳಲ್ಲಿ 5 ವಿಕೆಟ್ ಪಡೆಯುವ ಮೂಲಕ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಐದು ವಿಕೆಟ್ ಪಡೆದ ಬೌಲರ್ ಎಂಬ ಗೌರವ ಪಡೆದುಕೊಂಡರು.

ಈ ಸಾಧನೆಯೊಂದಿಗೆ ಸ್ಟಾರ್ಕ್ ಆಸ್ಟ್ರೇಲಿಯಾದ ಆರ್ನಿ ತೋಷಾಕ್ ಮತ್ತು ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಅವರ 19 ಎಸೆತಗಳಲ್ಲಿ 5 ವಿಕೆಟ್ ದಾಖಲೆಯನ್ನು ಮುರಿದಿದ್ದಾರೆ. ವೆಸ್ಟ್ ಇಂಡೀಸ್ ತಂಡ 14.3 ಓವರ್‌ಗಳಲ್ಲಿ ಕೇವಲ 27 ರನ್‌ಗಳಿಗೆ ಆಲೌಟ್ ಆದರೂ, ಇದರಲ್ಲಿ ಏಳು ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದರು. ಆಸ್ಟ್ರೇಲಿಯಾದ ಇನ್ನೊಬ್ಬ ವೇಗದ ಬೌಲರ್ ಸ್ಕಾಟ್ ಬೋಲಾಂಡ್ ಕೂಡ ಈ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿ ಗಮನಸೆಳೆದರು. ಈ ಹ್ಯಾಟ್ರಿಕ್ ಆಸ್ಟ್ರೇಲಿಯಾದ 10ನೇ ಟೆಸ್ಟ್ ಹ್ಯಾಟ್ರಿಕ್ ಆಗಿದೆ.

ಸ್ಟಾರ್ಕ್ ಈ ಪಂದ್ಯಕ್ಕೆ ಪ್ರವೇಶಿಸಿದಾಗ ಅವರ ಖಾತೆಯಲ್ಲಿ 395 ಟೆಸ್ಟ್ ವಿಕೆಟ್‌ಗಳಿದ್ದವು. 6 ವಿಕೆಟ್ ಪಡೆದ ನಂತರ ಅವರು 400 ವಿಕೆಟ್‌ಗಳ ಗಡಿಯನ್ನು ದಾಟಿದರು. ಗ್ಲೆನ್ ಮೆಕ್‌ಗ್ರಾತ್ ನಂತರ 100 ಟೆಸ್ಟ್‌ಗಳಲ್ಲಿ 400 ವಿಕೆಟ್ ಪಡೆದ ಎರಡನೇ ಆಸ್ಟ್ರೇಲಿಯಾದ ವೇಗದ ಬೌಲರ್ ಎಂಬ ಹೆಗ್ಗಳಿಕೆ ಅವರಿಗೆ ಸಿಕ್ಕಿದೆ.

ಸ್ಟಾರ್ಕ್ ಅವರ ಮೊದಲ ಓವರ್‌ನಲ್ಲೇ 3 ವಿಕೆಟ್‌ಗಳನ್ನು ಪಡೆದು, 2006ರಲ್ಲಿ ಪಾಕಿಸ್ತಾನ ವಿರುದ್ಧ ಇರ್ಫಾನ್ ಪಠಾನ್ ಸಾಧಿಸಿದ ದಾಖಲೆಗೆ ಸಮಗೊಂಡಿದೆ. ಈ ಭಯಾನಕ ಬೌಲಿಂಗ್ ದಾಳಿಯಿಂದ ವೆಸ್ಟ್ ಇಂಡೀಸ್‌ ತಂಡ ಸಂಪೂರ್ಣ ಕುಸಿತಕ್ಕೆ ತುತ್ತಾಯಿತು. ಆಸ್ಟ್ರೇಲಿಯಾ 176 ರನ್‌ಗಳಿಂದ ಗೆಲುವು ಸಾಧಿಸಿ ಸರಣಿಯನ್ನು 3-0 ಅಂತರದಿಂದ ಜಯಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!