ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 5 ರಿಂದ ಸಾರಿಗೆ ಸಿಬ್ಬಂದಿಗಳು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರವನ್ನು ಕೈಗೊಂಡಿದ್ದಾರೆ.
KSRTC, BMTC, NWKRTC ಹಾಗೂ KKRTC ನೌಕರರು ಸೇರಿ ಈ ಬಾರಿಯ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ವೇತನ ಶೇ.25ರಷ್ಟು ಹೆಚ್ಚಳ ಹಾಗೂ 38 ತಿಂಗಳ ಬಾಕಿಯ ವೇತನ ಬಿಲ್‌ಗಳ ಬಿಡುಗಡೆ ಅವರಿಗೆ ಪ್ರಮುಖ ಬೇಡಿಕೆಯಾಗಿವೆ.
ಈ ಹಿಂದೆ, ನೌಕರರ ಬೇಡಿಕೆಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 4ರಂದು ಸಭೆ ಕರೆದು, ಆರು ದಿನದೊಳಗೆ ಮತ್ತೊಂದು ಸಭೆ ಕರೆಯುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಸಭೆ ಕರೆಯದೇ ಇರುವುದರಿಂದ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮುಷ್ಕರಕ್ಕೆ ನಿರ್ಧಾರ ಮಾಡಿದ್ದಾರೆ.
ನಾವು 25% ವೇತನ ಹೆಚ್ಚಳ ಕೇಳಿದ್ದೆವು. ಆದರೆ, ಬೊಮ್ಮಾಯಿ ಸರ್ಕಾರ ಶೇ.15ರಷ್ಟು ಹೆಚ್ಚಳ ಮಾಡಿತು. ಅದೂ ಸರಿಯಾದ ರೀತಿಯಲ್ಲಿ ಅನುಷ್ಠಾನವಾಗಿಲ್ಲ. ಈಗ 38 ತಿಂಗಳ ಅರಿಯರ್ಸ್ (ಹಿಂಬಾಕಿ) ಇನ್ನೂ ಕೊಡಲಾಗಿಲ್ಲ ಎಂದು ನೌಕರರು ಹೇಳುತ್ತಿದ್ದಾರೆ.
ಶ್ರೀನಿವಾಸ ಮೂರ್ತಿ ಸಮಿತಿಯ ಶಿಫಾರಸ್ಸುಗಳನ್ನು ಸ್ವೀಕರಿಸಿ ಸರಕಾರ ಅಧಿಕೃತ ಆದೇಶ ಹೊರಡಿಸಬೇಕೆಂಬ ಬೇಡಿಕೆಯೂ ನೌಕರರಿಂದ ಬಂದಿದೆ. ಈ ಸಮಿತಿಯ ಶಿಫಾರಸ್ಸುಗಳಂತೆ ತ್ವರಿತವಾಗಿ ಶೇ.25ರಷ್ಟು ವೇತನ ಹೆಚ್ಚಳ ಮಾಡಿ, ಬಾಕಿ ಹಣ ಬಿಡುಗಡೆ ಮಾಡಬೇಕೆಂಬ ಒತ್ತಾಯ ಉಂಟಾಗಿದೆ.
ಈ ಹಿಂದೆ ಡಿಸೆಂಬರ್ 31ರಿಂದಲೇ ಮುಷ್ಕರ ಮಾಡುವ ನಿರ್ಧಾರ ತೆಗೆದುಕೊಂಡಿದ್ದ ನೌಕರರು, ಮುಖ್ಯಮಂತ್ರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಹಿಂದೇಟು ಹಾಕಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ನೌಕಕರ ಸಭೆ ಕರೆಯಲಿಲ್ಲ, ಸಾರಿಗೆ ನೌಕರರಿಗೆ ಕಳೆದ ವರ್ಷ ನೀಡಿದ್ದ ಯಾವುದೇ ಬೇಡಿಕೆ ಈಡೇರಿಕೆಯ ಭರವಸೆಗಳನ್ನು ಈಡೇರಿಸಲಿಲ್ಲ. ಈಗ ಮತ್ತೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ಕೊಟ್ಟು ಜನರ ಮೆಚ್ಚುಗೆ ಗೆಲ್ಲಲು ಯತ್ನಿಸುತ್ತಿದ್ದಾರೆ. ಆದರೆ ನೌಕರರ ವೇತನ ಯಾಕೆ ಮರೆತುಹೋಗುತ್ತಿದೆ?’ ಎಂದು ಪ್ರಶ್ನೆ ಮಾಡಿದ್ದಾರೆ.
ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್‌ಗಾಗಿ ಸರ್ಕಾರ 500 ಕೋಟಿ ವೆಚ್ಚವನ್ನ ಹೊರಡಿಸಿದೆ. ಆದರೆ, ಡ್ರೈವರ್, ಕಂಡಕ್ಟರ್‌ಗಳ ಬವಣೆ ಯಾರಿಗೂ ಕಾಣಿಸುತ್ತಿಲ್ಲ. ಇದು ನಮಗೆ ಸಂಭ್ರಮವಲ್ಲ, ನೋವಿನ ವಿಷಯವಾಗಿದೆ ಎಂದು ಸಾರಿಗೆ ನೌಕರರು ಅಳಲು ತೋಡಿಕೊಂಡಿದ್ದಾರೆ.
ಈ ಬಾರಿ ಯಾವುದೇ ಮಾತಿನ ಭರವಸೆ, ಸಭೆಯ ಒತ್ತಡ ನಾವು ಒಪ್ಪೋದಿಲ್ಲ. ನಮಗೆ ಬೇಕಾಗಿರುವುದು ವೇತನ ಶೇ.25ರಷ್ಟು ಹೆಚ್ಚಳ ಹಾಗೂ ಎಲ್ಲಾ ಅರಿಯರ್ಸ್. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆಗಸ್ಟ್ 5ರ ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಖಚಿತ’ ಎಂದು ನೌಕರರ ಸಂಘ ಘೋಷಿಸಿದೆ.