ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ದ.ಕ. ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಸಂಕ್ರಮಣದ ವಿಶೇಷ ದಿನದಂದು ದೈವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಸೇವೆ ಸಲ್ಲಿಸಿದ್ದಾರೆ.
ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವಸ್ಥಾನಕ್ಕೆ ಕಳೆದ ಮೇ ೧೩ರಂದು ದೈವಸ್ಥಾನದ ಬ್ರಹಕಲಶೋತ್ಸವಕ್ಕೆ ಆಗಮಿಸಬೇಕಿದ್ದ ರೆಡ್ಡಿ ಅಂದು ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿ ಆಗಮಿಸಲು ಸಾಧ್ಯವಾಗಿರಲಿಲ್ಲ. ಮೇ ೧೩ರಂದು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ದೈವದ ಬಳಿ ಜನಾರ್ದನ ರೆಡ್ಡಿ ಆಪ್ತರು ಜೈಲಿನಿಂದ ಬಿಡುಗಡೆಗೆ ಮೊರೆ ಇಟ್ಟಿದ್ದರು. ಇಂದಿನಿಂದ ೧ ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ದೈವ ನುಡಿ ನೀಡಿತ್ತು. ಗ್ರಾಮದ ದೈವ ಕೆಡೆಂಜೋಡಿತ್ತಾಯಿ ದೈವ ರೆಡ್ಡಿಗೆ ಜೈಲಿನಿಂದ ಬಿಡುಗಡೆಯಾಗುವ ಅಭಯ ನೀಡಿತ್ತು.
ದೈವದ ಅಭಯದಂತೆ ಒಂದು ತಿಂಗಳ ಒಳಗೆ ಗಾಲಿ ಜನಾರ್ದನ ರೆಡ್ಡಿ ಅವರು ಬಿಡುಗಡೆಯಾಗಿದ್ದರು. ಹಾಗಾಗಿ ಜು.೧೬ರಂದು ಸಂಕ್ರಮಣ ದಿನದಂದು ಸವಣೂರಿನಲ್ಲಿರುವ ಇರುವೆರ್ ಉಳ್ಳಾಕುಲು ಮತ್ತು ಕೆಡೆಂಜೋಡಿತ್ತಾಯಿ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಬಿಡುಗಡೆಯ ಒಂದೂವರೆ ತಿಂಗಳ ಬಳಿಕ ಸಂಕ್ರಮಣದ ವಿಶೇಷ ದಿನದಂದು ದೈವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಸೇವೆ ಸಲ್ಲಿಸಿದ್ದಾರೆ.
ನೂತನ ಸಭಾಭವನಕ್ಕೆ ಶಿಲಾನ್ಯಾಸ
ಈ ಸಂದರ್ಭದಲ್ಲಿ ದೈವಸ್ಥಾನದ ಆವರಣದಲ್ಲಿ ನೂತನ ಸಭಾಭವನಕ್ಕೆ ಜನಾರ್ದನ ರೆಡ್ಡಿ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ದೈವಗಳ ನಾಡು ಪರಶುರಾಮ ಸೃಷ್ಟಿಯ ತುಳುನಾಡು. ದೈವದ ಆಶೀರ್ವಾದ ಪಡೆಯಲು ನಾನು ಆರೇಲ್ತಡಿಗೆ ಬಂದಿದ್ದೇನೆ. ನನ್ನನ್ನು ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಿದ್ದರು. ಆದರೆ, ಕಾನೂನು ತೊಡಕು ಉಂಟಾಗಿ ಜೈಲಿಗೆ ಹೋಗುವಂತಾಯಿತು. ಈ ಸಂದರ್ಭ ಇಲ್ಲಿನ ಜನರು ನನ್ನ ಬಿಡುಗಡೆಗಾಗಿ ದೈವದ ಬಳಿ ಪ್ರಾರ್ಥಿಸಿದ್ದರು. ಆ ಸಂದರ್ಭದಲ್ಲಿ ದೈವದ ನುಡಿಯಂತೆ ನಾನು ಜೈಲಿನಿಂದ ಬಿಡುಗಡೆಯಾಗುವಂತಾಗಿದೆ. ಜೀವನದಲ್ಲಿ ಎಲ್ಲಾ ಏಳು ಬೀಳುಗಳು ಕೂಡ ದೇವರ ಇಚ್ಛೆಯಂತೆ ನಡೆಯುತ್ತದೆ. ಕಾನೂನು ತೊಡಕು ಕೂಡ ಭಗವಂತನ ಪರೀಕ್ಷೆ ಎಂದು ನಾನು ಭಾವಿಸಿದ್ದೇನೆ. ಇಲ್ಲಿನ ದೈವದ ಕಾರಣಿಕತೆ ಬಣ್ಣಿಸಲು ಪದಗಳಿಲ್ಲ ಎಂದರು.
ಈ ಸಂದರ್ಭ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ , ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸವಣೂರು ಗ್ರಾ.ಪಂ. ಅಧ್ಯಕ್ಷೆ ಸುಂದರಿ ಬಿ.ಎಸ್., ನಳಿನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಪ್ರಶಾಂತ್ ಕೆಡೆಂಜಿ, ಆರೇಲ್ತಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರ, ಕಾರ್ಯದರ್ಶಿ ಚಂದ್ರಶೇಖರ ಪಟ್ಟೆ ಉಪಸ್ಥಿತರಿದ್ದರು.