ಸಿರಿಯಾ ಸೇನಾ ಪ್ರಧಾನ ಕಚೇರಿ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ

ಹೊಸ ದಿಗಂತ ಡಿಜಿಟಿಲ್ ಡೆಸ್ಕ್:

ಸಿರಿಯಾ ರಾಜಧಾನಿ ಡೆಮಾಸ್ಕಸ್‌ ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಪ್ರವೇಶದ್ವಾರವನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಸೇನೆಯು ದಾಳಿ ನಡೆಸಿದೆ.

ಈ ದಾಳಿಯಲ್ಲಿ ದೇಶದ ರಕ್ಷಣಾ ಸಚಿವಾಲಯದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಸಿರಿಯಾದ ಭದ್ರತಾ ಅಧಿಕಾರಿಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ‘

ಸಿರಿಯಾದ ಡಮಾಸ್ಕಸ್ ಪ್ರದೇಶದಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯ ಪ್ರವೇಶದ್ವಾರದ ಮೇಲೆ ದಾಳಿ ನಡೆಸಿದ್ದೇವೆ’ ಎಂದು ಇಸ್ರೇಲಿ ಸೇನೆ ಹೇಳಿಕೆಯಲ್ಲಿ ದೃಢಪಡಿಸಿದೆ. ಈ ಬಗ್ಗೆ ಇಸ್ರೇಲ್‌ ಡಿಫೆನ್ಸ್‌ ಫೋರ್ಸಸ್‌ (IDF) ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ದಕ್ಷಿಣ ಸಿರಿಯಾದಲ್ಲಿ ಡ್ರೂಝ್ (Druze) ನಾಗರಿಕರ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಆಡಳಿತದ ಕ್ರಮಗಳನ್ನು ಐಡಿಎಫ್ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದೆ.

ದಕ್ಷಿಣ ಸಿರಿಯಾದ ಡ್ರೂಝ್ ಬಹುಸಂಖ್ಯಾತ ನಗರವಾದ ಸ್ವೀಡಾದಲ್ಲಿ ಸರ್ಕಾರಿ ಪಡೆಗಳು ಮತ್ತು ಸ್ಥಳೀಯ ಡ್ರೂಝ್ ಬಣಗಳ ನಡುವಿನ ಕದನ ವಿರಾಮ ಮುರಿದುಬಿದ್ದಿರುವ ನಡುವೆಯೇ ಈ ವೈಮಾನಿಕ ದಾಳಿ ನಡೆದಿದೆ. ಡ್ರೂಝ್ ಸಮುದಾಯವನ್ನು ರಕ್ಷಿಸಲು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.

ಡ್ರೂಝ್ ಎನ್ನುವುದು 10ನೇ ಶತಮಾನದಲ್ಲಿ ಶಿಯಾ ಇಸ್ಲಾಂನಿಂದ ಹೊರಹೊಮ್ಮಿದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ. ವಿಶ್ವಾದ್ಯಂತ ಅಂದಾಜು ಒಂದು ಮಿಲಿಯನ್ ಡ್ರೂಝ್‌ಗಳಲ್ಲಿ, ಅರ್ಧಕ್ಕಿಂತ ಹೆಚ್ಚು ಜನರು ಸಿರಿಯಾದಲ್ಲಿ ವಾಸಿಸುತ್ತಿದ್ದಾರೆ. ಲೆಬನಾನ್ ಮತ್ತು ಇಸ್ರೇಲ್‌ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮುದಾಯದ ಜನರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!