ನಮ್ಮ ದೇಹದಲ್ಲಿ ಮೆದುಳು ಅತ್ಯಂತ ಪ್ರಮುಖ ಅಂಗ. ಅದು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಪೋಷಕಾಂಶಗಳ ಸಮರ್ಪಕ ಸೇವನೆ ಅಗತ್ಯ. ಇತ್ತೀಚಿನ ಅಧ್ಯಯನಗಳ ಪ್ರಕಾರ, ನಾವು ಸೇವಿಸುವ ಆಹಾರಗಳು ನೇರವಾಗಿ ಮೆದುಳಿನ ಸಾಮರ್ಥ್ಯ, ಸ್ಮರಣಶಕ್ತಿ ಮತ್ತು ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತವೆ. ಮೆದುಳನ್ನು ಸಕ್ರಿಯವಾಗಿಡಲು ಯಾವ ಆಹಾರಗಳು ಸಹಾಯಮಾಡುತ್ತವೆ ಎಂಬ ಕುರಿತು ಇವತ್ತಿನ ಲೇಖನ.
ಒಮೆಗಾ-3 ಕೊಬ್ಬಿನಾಮ್ಲಗಳು ಮೆದುಳಿನ ಕೋಶಗಳ ರಚನೆ ಮತ್ತು ಕ್ರಿಯೆಗಾಗಿ ಮುಖ್ಯವಾದ ಅಂಶ. ಅಗಸೆ ಬೀಜ, ಚಿಯಾ ಬೀಜ ಹಾಗೂ ವಾಲ್ನಟ್‌ಗಳಲ್ಲಿ ಈ ಅಂಶದ ಸಂತೃಪ್ತ ಪ್ರಮಾಣದಲ್ಲಿ ದೊರೆಯುತ್ತದೆ. ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿದರೆ ಸ್ಮರಣಶಕ್ತಿ ಹಾಗೂ ಏಕಾಗ್ರತೆ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಬ್ಲೂಬೆರ್ರಿ, ಪಾಲಕ್, ಬ್ರೊಕೊಲಿ ಮತ್ತು ಡಾರ್ಕ್ ಚಾಕೊಲೇಟ್‌ಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಿದ್ದು, ಇವು ಮೆದುಳನ್ನು ಹಾನಿಕರ ರಾಸಾಯನಿಕಗಳಿಂದ ರಕ್ಷಿಸುತ್ತವೆ. ಫ್ಲೇವನಾಯ್ಡ್‌ಗಳು ರಕ್ತದ ಪರಿಚಲನೆಯನ್ನು ಸುಧಾರಿಸುತ್ತವೆ. ಇದರಿಂದ ಮೆದುಳಿಗೆ ಹೆಚ್ಚು ಆಮ್ಲಜನಕ ಮತ್ತು ಪೋಷಕಾಂಶಗಳು ತಲುಪುತ್ತವೆ.
ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಘಟಕ ಉರಿಯೂತ ನಿವಾರಕ ಹಾಗೂ ಉತ್ಕರ್ಷಣ ನಿರೋಧಕ. ಇದು ಸ್ಮರಣಶಕ್ತಿ ವೃದ್ಧಿಗೆ ಸಹಕಾರಿಯಾಗುತ್ತದೆ. ಹಾಗೆಯೇ ಕುಂಬಳಕಾಯಿ ಬೀಜಗಳಲ್ಲಿ ಸತು, ಮೆಗ್ನೀಸಿಯಮ್ ಮತ್ತು ಕಬ್ಬಿಣ ಮುಂತಾದ ಅಂಶಗಳು ಮೆದುಳಿಗೆ ಶಕ್ತಿಯನ್ನು ಒದಗಿಸುತ್ತವೆ.
ಮತ್ತು ಮೊಟ್ಟೆಗಳಲ್ಲಿ ಕೋಲೀನ್, ವಿಟಮಿನ್ ಬಿ6 ಹಾಗೂ ಬಿ12 ಇರುವ ಕಾರಣ, ಇದು ಮೆದುಳಿನ ಕೋಶಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ತಜ್ಞರ ಅಭಿಪ್ರಾಯದಂತೆ ಹಸಿರು ತರಕಾರಿಗಳು, ಧಾನ್ಯಗಳು, ಕೊಬ್ಬಿನ ಮೀನು ಹಾಗೂ ವಿವಿಧ ಬೀಜಗಳು ದಿನನಿತ್ಯದ ಆಹಾರದಲ್ಲಿ ಸೇರಿಸಬೇಕು.
ಮೆದುಳಿಗೆ ಪೋಷಕಾಂಶ ನೀಡುವುದರ ಜೊತೆಗೆ ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಹಾಗೂ ಒತ್ತಡ ಮುಕ್ತ ಜೀವನ ಶೈಲಿಯೂ ಅವಶ್ಯಕ. ಈ ಎಲ್ಲ ಕ್ರಮಗಳನ್ನು ಪಾಲಿಸಿದರೆ, ಮೆದುಳಿನ ಆರೋಗ್ಯ ಸುಧಾರಣೆ ಮಾತ್ರವಲ್ಲದೆ, ಮರೆಗುಳಿತನ ಹಾಗೂ ಬುದ್ಧಿಶಕ್ತಿ ಹೀನತೆಗೆ ತಡೆಯೊಡ್ಡಲು ಸಾಧ್ಯವೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.