ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹತ್ವದ ಬೆಳವಣಿಗೆಯಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣವನ್ನು ಕಡ್ಡಾಯಗೊಳಿಸಲಾಗಿದ್ದು, ನಿತ್ಯ ಒಂದೊಂದು ಶ್ಲೋಖ ಪಠಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಇನ್ಮುಂದೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯವೆಂದು ಉತ್ತರಾಖಂಡ ಸರ್ಕಾರ ಆದೇಶ ಹೊರಡಿಸಿದೆ.
ಜುಲೈ 14ರಂದು ಆದೇಶ ಹೊರಡಿಸಲಾಗಿದ್ದು, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೆಳಗ್ಗೆ ಭಗವದ್ಗೀತೆಯ ಶ್ಲೋಕಗಳನ್ನು ವಿದ್ಯಾರ್ಥಿಗಳು ಪಠಿಸಬೇಕೆಂದು ನಿರ್ದೇಶನ ನೀಡಲಾಗಿದೆ. ದಿನವೂ ಒಂದು ಶ್ಲೋಕವನ್ನು ಪಠಿಸುವುದಷ್ಟೇ ಅಲ್ಲದೆ ಒಂದು ಶ್ಲೋಕವನ್ನು ವಾರದ ಶ್ಲೋಕವೆಂದು ಘೋಷಿಸಿ ಅದರ ಅರ್ಥದೊಂದಿಗೆ ನೋಟಿಸ್ ಬೋರ್ಡ್ನಲ್ಲಿ ಬರೆಯುವಂತೆ ಸೂಚಿಸಲಾಗಿದೆ.
ಮೂಲಗಳ ಪ್ರಕಾರ ಶ್ರೀಮದ್ ಭಗವದ್ಗೀತೆಯ ತತ್ವಗಳು ಮಾನವ ಮೌಲ್ಯಗಳು, ನಡವಳಿಕೆ, ನಾಯಕತ್ವ ಕೌಶಲ್ಯಗಳು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಭಾವನಾತ್ಮಕ ಸಮತೋಲನ ಮತ್ತು ವೈಜ್ಞಾನಿಕ ಚಿಂತನೆಯನ್ನು ಹೇಗೆ ಅಭಿವೃದ್ಧಿಪಡಿಸುತ್ತವೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿಕೊಡಲಿದ್ದಾರೆ ಎನ್ನಲಾಗಿದೆ.