ಹೊಸದಿಗಂತ ಮಳವಳ್ಳಿ :
ಮೀನು ಹಿಡಿಯಲು ಹೋಗಿದ್ದ ಅನೇಕಲ್ ತಾಲ್ಲೋಕಿನ ಬನ್ನೇರುಘಟ್ಟ ಸಮೀಪದ ಬ್ಯಾಡರಾಯನದೊಡ್ಡಿ ಗ್ರಾಮದ ಅರುಣ್ (24) ಶಿಂಷಾ ನದಿಯಲ್ಲಿ ಕೊಚ್ಚಿ ಹೋದ ಧಾರುಣ ಘಟನೆ ಸಮೀಪದ ತೊರೆಕಾಡನಹಳ್ಳಿ ಸೇತುವೆ ಬಳಿ ಬುಧವಾರ ತಡರಾತ್ರಿ ನಡೆದಿದೆ.
ಸಮೀಪದ ತೊರೆಕಾಡನಹಳ್ಳಿಯ ವ್ಯಾಪ್ತಿಯ ಶಿಂಷಾ ನದಿಗೆ ಮೀನು ಹಿಡಿಯಲು ತನ್ನ ಐದು ಮಂದಿ ಸಹಪಾಟಿಗಳೊಂದಿಗೆ ಬುಧವಾರ ರಾತ್ರಿ ಬಂದಿದ್ದರು. ಶಿಂಷಾ ನದಿ ಪಾತ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ಇಗ್ಗಲೂರು ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದ ನೀರನ್ನು ರಾತ್ರಿ ಶಿಂಷಾ ನದಿಗೆ ಹರಿಬಿಡಲಾಗಿದೆ.
ಮಧ್ಯರಾತ್ರಿ 2 ಗಂಟೆಯ ಸಮಯದಲ್ಲಿ ಸೇತುವೆ ಕೆಳಗಡೆ ಕುಳಿತು ಮೀನು ಹಿಡಿಯಲು ಹೋಗಿದ್ದವರಿಗೆ ಏಕಾಏಕಿ ನೀರು ಅಪ್ಪಳಿಸಿದೆ. ಒಂದೆಡೆ ಓಡಿ ಹೋದ ನಾಲ್ವರು ದುರಂತದಿಂದ ಪಾರಾಗಿದ್ದಾರೆ. ವಿರುದ್ದ ದಿಕ್ಕಿನಡೆಗೆ ಈಜಲು ಹೋದ ಅರುಣ್ ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.