ಹೊಸದಿಗಂತ ಚಿತ್ರದುರ್ಗ:
ಮಾರಕಾಸ್ತ್ರಗಳ ಸಹಿತ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಆರೋಪಿಗಳನ್ನು ಬಂಧಿಸಿ ದರೋಡೆ ಪ್ರಕರಣ ತಡೆಯುವಲ್ಲಿ ಭರಮಸಾಗರ ಪೊಲೀಸರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಬಂಧಿತರನ್ನು ಶಿವಮೊಗ್ಗ ನಗರದ ಕಾರ್ತಿಕ್, ಭದ್ರಾವತಿ ತಾಲ್ಲೂಕಿನ ತಟ್ಟಿಹಳ್ಳಿ ಗ್ರಾಮದ ಮದನ್ ಹಾಗೂ ಹರೀಶ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ತಮ್ಮ ಸಹಚರರು ಸೇರಿದಂತೆ ಎಂಟು ಜನರ ಅಕ್ರಮ ಗುಂಪು ಕಟ್ಟಿಕೊಂಡು ದರೋಡೆ ಮಾಡಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಇದಕ್ಕಾಗಿ ಸಿರಿಗೆರೆ ಬಳಿಯ ಅಳಗವಾಡಿಗೆ ಹೋಗುವ ದಾರಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬಾಗ್ಮಿದಾರರು ನೀಡಿದ ಮಾಹಿತಿಯನ್ವಯ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಐದು ಜನ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅಡಿಕೆ ಮಾರಾಟ ಮಾಡಿ ಹಣದೊಂದಿಗೆ ಆ ಮಾರ್ಗದಲ್ಲಿ ಬರಲಿದ್ದ ವ್ಯಕ್ತಿ ಬಳಿಯ ಹಣ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಬಂಧಿತರಿಂದ ಕೃತ್ಯ ನಡೆಸಲು ತಂದಿದ್ದ ಕಾರು, ಒಂದು ಡ್ರ್ಯಾಗನ್ ಚಾಕು, ಎರಡು ಕಬ್ಬಿಣದ ಲಾಂಗ್ ಗಳು, ಕಾರದ ಪುಡಿ ಪ್ಯಾಕೇಟ್ ಗಳು ಹಾಗೂ ಆರೋಪಿಗಳ ಬಳಿಯಿದ್ದ ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.