ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕಾದ ಅಲಾಸ್ಕಾ ಕರಾವಳಿಯಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.
ಭೂಕಂಪದ ಕೇಂದ್ರಬಿಂದುವು ದ್ವೀಪ ಪಟ್ಟಣವಾದ ಸ್ಯಾಂಡ್ ಪಾಯಿಂಟ್‌ನ ದಕ್ಷಿಣಕ್ಕೆ ಸುಮಾರು 54 ಮೈಲುಗಳು (87 ಕಿಲೋಮೀಟರ್) ದೂರದಲ್ಲಿದೆ ಎಂದು ಯುಎಸ್‌ಜಿಎಸ್ ತಿಳಿಸಿದೆ.
ದಕ್ಷಿಣ ಅಲಾಸ್ಕಾ ಮತ್ತು ಅಲಾಸ್ಕಾ ಪರ್ಯಾಯ ದ್ವೀಪದ ಕರಾವಳಿ ಪ್ರದೇಶಗಳಿಗೆ ನೀಡಲಾಗಿದ್ದ ಸುನಾಮಿ ಸಲಹೆಯನ್ನು ರದ್ದುಪಡಿಸಲಾಗಿದೆ ಎಂದು ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ (NTWC) ತಿಳಿಸಿದೆ.
ಆರಂಭದಲ್ಲಿ ಭೂಮಿಯು 12 ಬಾರಿ ಕಂಪಿಸಿತ್ತು. ಈ ಪೈಕಿ ಒಂದು ಭೂಕಂಪ 5.2ರಷ್ಟು ತೀವ್ರತೆಯನ್ನು ಹೊಂದಿತ್ತು. ಸುನಾಮಿ ಎಚ್ಚರಿಕೆ ಮತ್ತು ಸಲಹೆಯನ್ನು ಅಲಾಸ್ಕನ್ ಕರಾವಳಿ ಪ್ರದೇಶಗಳಿಗೆ ಮಾತ್ರ ನೀಡಲಾಗಿದ್ದು, ದೂರದ ಪ್ರದೇಶಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.
ಸ್ಥಳೀಯ ಅಧಿಕಾರಿಗಳು ಸುರಕ್ಷಿತ ಎಂದು ಸೂಚಿಸುವವರೆಗೆ ಅಪಾಯ ವಲಯಗಳಿಗೆ ತೆರಳಬಾರದು ಎಂದು ಸಲಹೆ ನೀಡಿದೆ.