ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದ ಬಳಿಕ ಇದುವರೆಗೆ 15,000 ಎನ್‌ಕೌಂಟರ್‌ಗಳಾಗಿವೆ. ಆ ಪೈಕಿ 238 ಮಂದಿ ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2017 ರಿಂದ ಉತ್ತರ ಪ್ರದೇಶ ಪೊಲೀಸರು ಸುಮಾರು 15,000 ಎನ್‌ಕೌಂಟರ್‌ಗಳನ್ನು ದಾಖಲಿಸಿದ್ದಾರೆ. 30,000 ಕ್ಕೂ ಹೆಚ್ಚು ಅಪರಾಧಿಗಳನ್ನು ಬಂಧಿಸಲಾಗಿದೆ. 9,000 ಕ್ಕೂ ಹೆಚ್ಚು ಜನರ ಕಾಲಿಗೆ ಗುಂಡೇಟು ಬಿದ್ದಿದೆ. ಪರಾರಿಯಾಗಲು ಪ್ರಯತ್ನಿಸಿದವರು, ಮತ್ತೆ ಮತ್ತೆ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡವರನ್ನು ಗುರಿಯಾಗಿಸಿ ನಡೆಸಿದ ಕಾರ್ಯಾಚರಣೆಗಳಲ್ಲಿ 238 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದಂತೆ ಇಲಾಖೆಯು ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಎಂದು ಪೊಲೀಸ್ ಮಹಾನಿರ್ದೇಶಕ ರಾಜೀವ್ ಕೃಷ್ಣ ತಿಳಿಸಿದ್ದಾರೆ.
ಕಳೆದ ಎಂಟು ವರ್ಷಗಳಲ್ಲಿ 14,973 ಕಾರ್ಯಾಚರಣೆಗಳನ್ನು ನಡೆಸಲಾಗಿದೆ. 30,694 ಅಪರಾಧಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ 9,467 ಜನರ ಕಾಲಿಗೆ ಗುಂಡು ಹಾರಿಸಲಾಗಿದೆ. ಆದರೆ, 238 ಜನರು ಎನ್‌ಕೌಂಟರ್‌ಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದ ಮೀರತ್ ವಲಯದಲ್ಲಿ ಅತಿ ಹೆಚ್ಚು ಕೃತ್ಯಗಳು ನಡೆದಿವೆ. ಅಲ್ಲಿ 7,969 ಅಪರಾಧಿಗಳನ್ನು ಬಂಧಿಸಲಾಗಿದ್ದು, 2,911 ಮಂದಿ ಗಾಯಗೊಂಡಿದ್ದಾರೆ. ಆಗ್ರಾ ವಲಯದಲ್ಲಿ 5,529 ಅಪರಾಧಿಗಳನ್ನು ಬಂಧಿಸಲಾಗಿದ್ದು, 741 ಮಂದಿ ಗಾಯಗೊಂಡಿದ್ದಾರೆ. ಬರೇಲಿ ವಲಯದಲ್ಲಿ 4,383 ಅಪರಾಧಿಗಳನ್ನು ಬಂಧಿಸಲಾಗಿದ್ದು, 921 ಮಂದಿ ಗಾಯಗೊಂಡಿದ್ದಾರೆ. ವಾರಣಾಸಿ ವಲಯದಲ್ಲಿ ಪೊಲೀಸರು 2,029 ಅಪರಾಧಿಗಳನ್ನು ಬಂಧಿಸಲಾಗಿದ್ದು, 620 ಮಂದಿ ಗಾಯಗೊಂಡಿದ್ದಾರೆ ಎಂದು ಡಿಜಿಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗೌತಮ್ ಬುದ್ಧ ನಗರದಲ್ಲಿ 1,983 ಅಪರಾಧಿಗಳು ಸಿಕ್ಕಿಬಿದ್ದಿದ್ದು, 1,180 ಜನರು ಗಾಯಗೊಂಡಿದ್ದಾರೆ. ಗಾಜಿಯಾಬಾದ್ ಕಮಿಷನರೇಟ್‌ನಲ್ಲಿ 1,133 ಜನರನ್ನು ಬಂಧಿಸಲಾಗಿದ್ದು, 686 ಜನರು ಗಾಯಗೊಂಡಿದ್ದಾರೆ. ಆಗ್ರಾ ಕಮಿಷನರೇಟ್‌ನಲ್ಲಿ 1,060 ಅಪರಾಧಿಗಳನ್ನು ಬಂಧಿಸಲಾಗಿದ್ದು, 271 ಜನರು ಗಾಯಗೊಂಡಿದ್ದಾರೆ ಎಂದು ವಿವರಿಸಿದ್ದಾರೆ.