ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಸುರಕ್ಷಾ ಯೋಜನೆ ವಿಚಾರವಾಗಿ ಕರ್ನಾಟಕ ಕಂದಾಯ ಸಚಿವ ಕೃಷ್ಣಭೈರೇಗೌಡ ಶುಕ್ರವಾರ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಭೂಸುರಕ್ಷಾ ಯೋಜನೆ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದರೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಉದ್ದೇಶಪೂರಕವಾಗಿ ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡರವರು ತಹಸೀಲ್ದಾರ್ ಹಾಗೂ ಶಿರಸ್ತೇದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ವಿಕಾಸಸೌಧದಲ್ಲಿ ಇಂದು ನಡೆದ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್, ಉಪ ತಹಸೀಲ್ದಾರ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ಭೂಸುರಕ್ಷಾ ಯೋಜನೆಯಡಿ ಭೂದಾಖಲೆಗಳು ಡಿಜಿಟಲೀಕರಣಗೊಳ್ಳುವ ಪ್ರಕ್ರಿಯೆ ಇಡೀ ರಾಜ್ಯದಲ್ಲಿ ನಡೆಯುತ್ತಿದೆ. ಆದರೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಉದ್ದೇಶಪೂರಕವಾಗಿ ಆನ್‌ಲೈನ್‌ನಲ್ಲಿ ದೃಢೀಕರಿಸಿದ ದಾಖಲೆಗಳನ್ನು ನೀಡಲು ತಡೆಹಿಡಿಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.