ಹೊಸದಿಗಂತ ವರದಿ ಉಳ್ಳಾಲ:
ಕಳೆದ ಬುಧವಾರ ಸಂಜೆ ನಿರಂತರ ಸುರಿಯುತ್ತಿದ್ದ ಧಾರಾಕಾರ ಮಳೆಗೆ ಕೆಲಸ ಬಿಟ್ಟು ಮನೆಯ ಕಡೆಗೆ ತೆರಳುತ್ತಿದ್ದ ಕೂಲಿ ಕಾರ್ಮಿಕರೋರ್ವರು ಕಾಲುಸಂಕದ ಮುಖೇನ ಕಾಲುವೆ ದಾಟುತ್ತಿದ್ದ ವೇಳೆ ನೀರು ಪಾಲಾಗಿ ನಾಪತ್ತೆಯಾಗಿದ್ದು ,ಅವರ ಮೃತ ದೇಹವು ಇಂದು ಮದ್ಯಾಹ್ನ ಸೋಮೇಶ್ವರ ಉಚ್ಚಿಲದ ಹೊಳೆಯಲ್ಲಿ ಪತ್ತೆಯಾಗಿದೆ.
ಸೋಮೇಶ್ವರ ಗ್ರಾಮದ ಕುಂಪಲ ಆಶ್ರಯ ಕಾಲೊನಿಯ ನಿವಾಸಿ ಕೇಶವ ಶೆಟ್ಟಿ(64) ಮೃತ ವ್ಯಕ್ತಿ.
ಬುಧವಾರ ಸಂಜೆ ಏಳು ಗಂಟೆ ವೇಳೆಗೆ ಕೇಶವ ಅವರು ಎಡೆ ಬಿಡದೆ ಸುರಿಯುತ್ತಿದ್ದ ಮಳೆಯಲ್ಲಿ ಪಿಲಾರು ರಸ್ತೆಯಾಗಿ ಮನೆ ಕಡೆ ತೆರಳುತ್ತಿದ್ದರೆನ್ನಲಾಗಿದೆ.ಈ ವೇಳೆ ಉಕ್ಕಿ ಹರಿಯುತ್ತಿದ್ದ ಪಿಲಾರುವಿನ ರಾಜಕಾಲುವೆಯ ಕಾಲುಸಂಕವನ್ನ ದಾಟುತ್ತಿದ್ದ ವೇಳೆ ಕೇಶವ ಅವರು ನೀರುಪಾಲಾಗಿದ್ದರಂತೆ.ಮನೆ ಮಂದಿ ,ನೆರೆಹೊರೆಯವರು ಸೇರಿ ಕಾಲುವೆಯುದ್ದಕ್ಕೂ ಸಾಕಷ್ಟು ಹುಡುಕಾಟ ನಡೆಸಿದ್ದರೂ ಕೇಶವ ಅವರು ಸಿಕ್ಕಿರಲಿಲ್ಲ.ಕೇಶವ ಅವರ ಛತ್ರಿಯು ಕಾಲುವೆಯಲ್ಲಿ ಪತ್ತೆಯಾಗಿತ್ತು.ಮನೆ ಮಂದಿ ನಿನ್ನೆ ಉಳ್ಳಾಲ ಠಾಣೆಯಲ್ಲಿ ಕೇಶವ ಅವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು.
ಇಂದು ಮದ್ಯಾಹ್ನ ಉಚ್ಚಿಲದ ಹೊಳೆಯಲ್ಲಿ ಕೇಶವ ಅವರ ಮೃತ ದೇಹ ಪತ್ತೆಯಾಗಿದೆ.ಸ್ಥಳಕ್ಕೆ ಉಳ್ಳಾಲ ತಹಶೀಲ್ದಾರ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಮೃತ ದೇಹವನ್ನ ಹೊಳೆಯಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.
ಮೃತ ಕೇಶವ ಅವರು ಪತ್ನಿ ಹಾಗೂ ಪುತ್ರ,ಪುತ್ರಿಯನ್ನ ಅಗಲಿದ್ದಾರೆ.