ಕಾಂಗ್ರೆಸ್ ಶಾಸಕರಿಗೆ ಬಂಪರ್: ಅನುದಾನ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ ಇಂದು ಕಾಂಗ್ರೆಸ್ (Congress) ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ.

ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ತಲಾ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ರಸ್ತೆ, ಸೇತುವೆ, ಕಾಮಗಾರಿ, ಗ್ರಾಮೀಣ ರಸ್ತೆ, ನಗರ ಕಾಮಗಾರಿಗಳಿಗೆ 37.5 ಕೋಟಿ ರೂ. ಮೀಸಲು ಇಡಲಾಗಿದ್ದು, 12.5 ಕೋಟಿ ರೂ. ಅನುದಾನ ಶಾಸಕರ ವಿವೇಚನಾಧಿಕಾರಕ್ಕೆ ಮೀಸಲು ಇಡಲಾಗಿದೆ.

ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಜುಲೈ 30, 31ರಂದು ಶಾಸಕರ ಜತೆ ಸಭೆ ನಡೆಸಲಿದ್ದಾರೆ. ಶಾಸಕರು ಬೇಡಿಕೆ ಪತ್ರದೊಂದಿಗೆ ಕಾಮಗಾರಿ ವಿವರ ನೀಡಲು ಸೂಚನೆ ನೀಡಲಾಗಿದೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬಂದು ಶಾಸಕರ ಹಾಗೂ ಸಚಿವರ ಜತೆ ಒನ್ ಟು ಒನ್ ಮಾತುಕತೆ ನಡೆಸಿದ ಬೆನ್ನಲ್ಲೇ ಸಿದ್ದರಾಮಯ್ಯ ಈ ಕ್ರಮ ಕೈಗೊಂಡಿದ್ದಾರೆ.

2025-26 ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಲಾದ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ.ಗಳ ವಿಶೇಷ ಅನುದಾನ ಹಂಚಿಕೆ ಮಾಡಲಾಗುವುದು. ಮುಖ್ಯಮಂತ್ರಿಯವರಿಗೆ ಬರೆದ ತಮ್ಮ ಬೇಡಿಕೆ ಪತ್ರದೊಂದಿಗೆ, ಇದರೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಕಾಮಗಾರಿಗಳ ವಿವರಗಳನ್ನು ನೀಡುವುದು. ದಿನಾಂಕ:30.07.2025 ಹಾಗೂ ದಿನಾಂಕ:31.07.2025ರಂದು ಜಿಲ್ಲಾವಾರು ವಿಧಾನಸಭಾ ಸದಸ್ಯರ ಸಭೆಯನ್ನು ಕೊಠಡಿ ಸಂಖ್ಯೆ-313, ಸಮಿತಿ ಕೊಠಡಿ, 3ನೇ ಮಹಡಿ, ವಿಧಾನಸೌಧ ಇಲ್ಲಿ ಏರ್ಪಡಿಸಲಾಗಿದೆ. ಸದರಿ ಸಭೆಯ ವಿವರಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ಮೇಲ್ಕಂಡಂತೆ ಕಾಮಗಾರಿಗಳ ವಿವರಗಳೊಂದಿಗೆ ಸಭೆಗೆ ಹಾಜರಾಗುವುದು’ ಎಂದು ಸಿದ್ದರಾಮಯ್ಯ ಅವರ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!