ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾಡಿಸಿದ್ದು ನಾನು ಮತ್ತು ಮಹಾದೇವಪ್ಪ. ಯಾರೋ ಬಂದು ಅದರ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಆತನ ಹೆಸರು ಕೂಡ ನಾನು ಇಲ್ಲಿ ಹೇಳಲ್ಲ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪರೋಕ್ಷವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಯುವ ಕಾಂಗ್ರೆಸ್ ಕಾರ್ಯಕರ್ತರು ಸೈದ್ಧಾಂತಿಕವಾಗಿ ಯಾವತ್ತೂ ರಾಜಿ ಮಾಡಿಕೊಳ್ಳಬಾರದು. ರಾಜಿ ಮಾಡಿಕೊಂಡವರು ರಾಜಕೀಯವಾಗಿ ಉಳಿಯುವುದಿಲ್ಲ, ಬೆಳೆಯುವುದಿಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ಪಕ್ಷಕ್ಕೆ ಭಾರತೀಯ ಸಮಾಜಕ್ಕೆ ಪೂರಕವಾದ ಸಿದ್ಧಾಂತವೇ ಇಲ್ಲ. ಸಮಾಜವನ್ನು ವಿಭಜಿಸುವ ಸಿದ್ಧಾಂತ ಬಿಜೆಪಿಯದ್ದು. ಜೆಡಿಎಸ್ ರಾಜ್ಯದ ಕೆಲವೇ ಸ್ಥಳಗಳಲ್ಲಿ ಅಸ್ತಿತ್ವದಲ್ಲಿದೆ. ಈ ಪಕ್ಷಕ್ಕೂ ಸರಿಯಾದ ಸಿದ್ಧಾಂತ ಇಲ್ಲ ಎಂದರು.
ಮಂಡಲ್ ಕಮಿಷನ್ ವರದಿಯನ್ನು ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಕೊಟ್ಟಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಮಂಡಲ್ ವರದಿಯನ್ನು ವಿರೋಧಿಸಿದ್ದು ಇದೇ ಕಮಂಡಲವಾದಿಗಳು ಮತ್ತು ಮನುವಾದಿಗಳು. ಇವರ ಈ ಜನವಿರೋಧಿ ಇತಿಹಾಸವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ನೆನಪಿಡಬೇಕು ಎಂದರು.
ಮಹಿಳಾ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. ರಾಜೀವ್ ಗಾಂಧಿ ಯವರು ಸಂವಿಧಾನಕ್ಕೆ ತಿದ್ದುಪಡಿ ತಂದು 35% ಮಹಿಳಾ ಮೀಸಲಾತಿ ತಂದರು. ಈ ಮೀಸಲಾತಿಯನ್ನು 50% ಗೆ ಹೆಚ್ಚಿಸಲು ಹೋರಾಟ ಮಾಡಿದ್ದು ಸೋನಿಯಾಗಾಂಧಿ. ಇದನ್ನು ನೆನಪಿಡಬೇಕು ಎಂದರು.
ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ನಮ್ಮ ಜೊತೆ ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಬರಲಿ. ನಾನೇ ಬರುತ್ತೇನೆ. ಈ ಸವಾಲನ್ನು ಬಿಜೆಪಿ ಸ್ವೀಕರಿಸಲು ಸಿದ್ದವಿಲ್ಲ ಏಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಏನೂ ಕೆಲಸ ಮಾಡದೆ ಕೇವಲ ಬರೀ ಬುರುಡೆ ಬಿಡತ್ತೆ. ಬಿಜೆಪಿ ಯವರು ಕೆಲಸ ಮಾಡಿದ ಸಾಕ್ಷಿ ಗುಡ್ಡೆ ತೋರಿಸಿ ಎಂದರು.