February 6, 2026
Friday, February 6, 2026
spot_img

ಉದ್ಯೋಗ ಮೇಳಗಳ ಮೂಲಕ ನಿರುದ್ಯೋಗ ನಿವಾರಣೆಗೆ ಶ್ರಮ: ಸಚಿವ ಬೋಸರಾಜು

ಹೊಸದಿಗಂತ ವರದಿ, ರಾಯಚೂರು :

ಸರ್ಕಾರವು ಉದ್ಯೋಗ ಮೇಳಗಳನ್ನು ರಾಜ್ಯದಲ್ಲಿ ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ನಿರುದ್ಯೋಗ ನಿವಾರಣೆಗಾಗಿ ಶ್ರಮಿಸುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಎಡೆದೊರೆ ನಾಡು ರಾಯಚೂರು ಉತ್ಸವದ ಅಂಗವಾಗಿ ಇಲ್ಲಿನ ಕೃಷಿ ವಿ.ವಿ. ಆವರಣದಲ್ಲಿ ಏರ್ಪಡಿಸಲಾಗಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ನಿರುದ್ಯೋಗಿಗಳು ತಮ್ಮ ಭವ್ಯ ಭವಿಷ್ಯ ಕಂಡುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ, ಯುವನಿಧಿ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿ, ಅವರಿಗೆ ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಉದ್ಯೋಗ ಮೇಳಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ಯುವಶಕ್ತಿಗೆ ಆಸರೆಯಾಗುತ್ತಿದೆ. ಇಂತಹ ಉದ್ಯೋಗ ಮೇಳದ ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಂಸದ ಜಿ.ಕುಮಾರನಾಯಕ ಮಾತನಾಡಿ, ಜಗತ್ತಿನಲ್ಲಿಯೇ ನಮ್ಮ ದೇಶದಲ್ಲಿ ಯುವ ಮಾನವ ಸಂಪನ್ಮೂಲ ಹೆಚ್ಚಿದೆ. ಯುವ ಜನತೆಯೇ ನಮ್ಮ ದೇಶದ ಆಸ್ತಿ. ಈ ಯುವಶಕ್ತಿಯ ಸದ್ಬಳಕೆಯನ್ನು ನಮ್ಮ ದೇಶ ಮಾಡಿಕೊಳ್ಳಬೇಕಿದೆ. ಯುವ ಜನರಿಗೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲು, ಈ ಶಕ್ತಿಗೆ ಕೌಶಲ್ಯದ ತರಬೇತಿಯೂ ಅಗತ್ಯವಿದೆ. ಇದಕ್ಕಾಗಿ ಸರ್ಕಾರ ಹೆಚ್ಚಿನ ನೆರವು ನೀಡುತ್ತಿದೆ. ಯುವಜನತೆ ಕೌಶಲ್ಯವನ್ನು ಕಲಿತುಕೊಳ್ಳದಿದ್ದರೆ ಭವಿಷ್ಯದಲ್ಲಿ ಉತ್ತಮ ಉದ್ಯೋಗ ದೊರಕುವುದು ಕಷ್ಟಸಾಧ್ಯವಾಗುತ್ತದೆ ಎಂದರು.

ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ ಮಾತನಾಡಿ, ಜಿಲ್ಲೆಯಲ್ಲಿ ಯುವ ಜನತೆಗೆ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಿಕೊಡಲು ಕೆಐಎಡಿಬಿ ಅಡಿ ೪ ಸಾವಿರ ಎಕರೆ ಪ್ರದೇಶದಲ್ಲಿ ಟೆಕ್ಸ್ಟೈಲ್ ಪಾರ್ಕ್ ಸ್ಥಾಪಿಸಲು ಸಿದ್ಧತೆ ನಡೆದಿದೆ. ಇದರಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯದರೆ, ರಾಯಚೂರು ಜಿಲ್ಲೆಯ ಜನರಿಗೂ ಹೆಚ್ಚಿನ ಉದ್ಯೋಗಗಳು ಸೃಜನೆಯಾಗುತ್ತವೆ ಎಂದು ಹೇಳಿದರು.

ಉತ್ಸವದ ಅಂಗವಾಗಿ ಆಯೋಜಿಸಿದ್ದ ಉದ್ಯೋಗ ಮೇಳ ಹಲವಾರು ಯುವ ಜನರಿಗೆ ಬದುಕಿನ ಭದ್ರತೆ ಕಲ್ಪಿಸಿಕೊಳ್ಳಲು ವೇದಿಕೆಯಾಗಿ ಪರಿಗಣಿಸಿತು. ಮೇಳದಲ್ಲಿ ೬೩ಕಕೂ ಅಧಿಕ ಕಂಪನಿಗಳು ಪಾಲ್ಗೊಂಡಿದ್ದವು. ಆಟೋಮೊಬೈಲ್ ಮೆಕ್ಯಾನಿಕಲ್ ಕನ್‌ಸ್ಟçಕ್ಷನ್, ಮಾರ್ಕೆಟಿಂಗ್, ಸೇಲ್ಸ್ ಅಂಡ್ ರೀಟೇಲ್ ಟೆಲಿಕಾಂ, ಬಿಪಿಒ, ಟೆಕ್ಸ್ಟೈಲ್, ಬ್ಯಾಂಕಿAಗ್, ಫೈನಾನ್ಸ್, ಇನ್ಶೂರೆನ್ಸ್, ಹಾಸ್ಪಿಟಲ್ ಫಾರ್ಮಾಸಿಟಿಕಲ್ ಹೆಲ್ತ್ ಕೇರ್, ಟ್ರಾನ್ಸ್ಪೋರ್ಟ್, ಆಹಾರ ಸಂಸ್ಕರಣೆ, ಹೋಟೆಲ್ ನಿರ್ವಹಣೆ, ಗಾರ್ಮೆಂಟ್ಸ್, ಸೆಕ್ಯೂರಿಟಿ ಸೇರಿದಂತೆ ನಾನಾ ವಿಭಾಗದ ೬೩ ಕ್ಕೂ ಹೆಚ್ಚು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. ಉದ್ಯೋಗ ಮೇಳಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದರಾದರೂ, ಶುಕ್ರವಾರ ಮಧ್ಯಾಹ್ನದ ವೇಳೆಗೆ ೧೨೦೦ ಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದ ಲಾಭ ಪಡೆದುಕೊಂಡರು. ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿರುವ ಕೆಲಸಕ್ಕೆ ಅರ್ಜಿ ಸಲ್ಲಿಸಿ ಸಂದರ್ಶನದಲ್ಲಿ ಭಾಗವಹಿಸಿ ಸ್ಥಳದಲ್ಲಿಯೇ ನೇಮಕಾತಿ ಪತ್ರ ಪಡೆದರು.

ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಈಶ್ವರ ಕುಮಾರ ಕಾಂದೂ, ಜಿ.ಪಂ. ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಮುಖ್ಯ ಯೋಜನಾಧಿಕಾರಿ ಡಾ. ಟಿ.ರೋಣಿ, ಉದ್ಯೋಗಾಧಿಕಾರಿ ನವೀನ್ ಕುಮಾರ, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಜಿ.ಯು.ಹುಡೇದ ಸೇರಿದಂತೆ ಇತರರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !