ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಬಾಗ್‌ಪತ್‌ನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ತನ್ನ ತೋಳು, ಕಾಲು ಹಾಗೂ ಹೊಟ್ಟೆಯ ಮೇಲೆಯೇ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮನೀಷಾ (28) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ಪತಿ ಹಾಗೂ ಅತ್ತೆಯೇ ಕಾರಣ ಎಂದು ಆಕೆ ತೋಳು, ಕಾಲು ಹಾಗೂ ಹೊಟ್ಟೆಯ ಮೇಲೆ ಬರೆದುಕೊಂಡಿದ್ದಾರೆ.
ಮನೀಷಾ 2023ರಲ್ಲಿ ನೋಯ್ಡಾ ನಿವಾಸಿ ಕುಂದನ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಕೆಲ ತಿಂಗಳಲ್ಲೇ ಪತಿ ಹಾಗೂ ಅತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಬರೆದಿದ್ದಾರೆ.
ಜೊತೆಗೆ ವೀಡಿಯೋ ಮೂಲಕವು ಕಿರುಕುಳದ ಕ್ರೂರತೆ ಬಗ್ಗೆ ವಿವರಿಸಿದ್ದಾರೆ. ಪತಿ, ಅವರ ತಾಯಿ, ತಂದೆ ಮತ್ತು ಸಹೋದರ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಮದುವೆ ಸಂದರ್ಭದಲ್ಲಿ ಮನೀಷಾ ಕುಟುಂಬಸ್ಥರು 20 ಲಕ್ಷ ರೂ. ಖರ್ಚು ಮಾಡಿದ್ದರು. ಅಲ್ಲದೇ ವರದಕ್ಷಿಣೆಯಾಗಿ ಬುಲೆಟ್ ಬೈಕ್ ಸಹ ನೀಡಿದ್ದರು. ಆದರೆ ಪತಿ ಮನೆಯವರು ಪದೇ ಪದೇ ಕಾರು ಮತ್ತು ಹಣವನ್ನು ಕೇಳುತ್ತಿದ್ದರು ಎಂದಿದ್ದಾರೆ.
ಅತ್ತೆ ಮತ್ತು ಪತಿ ತನ್ನನ್ನು ಹೊಡೆಯುತ್ತಿದ್ದರು. ಅಲ್ಲದೇ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ವರದಕ್ಷಿಣೆ ಬೇಡಿಕೆಗಳಿಗೆ ಮಣಿಯದಿದ್ದಾಗ, ಅತ್ತೆ ಮತ್ತು ಪತಿ ವಿದ್ಯುತ್ ಸ್ಪರ್ಶಿಸಿ ಕೊಲ್ಲಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ.
ಕಳೆದ 4 ದಿನಗಳ ಹಿಂದೆ ವಿಚ್ಛೇದನ ಬಗ್ಗೆ ಮನೀಷಾ ಕುಟುಂಬಸ್ಥರು ಚರ್ಚಿಸಿದ್ದರು. ಅತ್ತೆ ಮತ್ತು ಪತಿ ವರದಕ್ಷಿಣೆ ವಸ್ತುಗಳನ್ನು ಹಿಂದಿರುಗಿಸುವವರೆಗೆ ವಿಚ್ಛೇದನ ಪತ್ರಗಳಿಗೆ ಸಹಿ ಹಾಕುವುದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.