ಹೊಸದಿಗಂತ ವರದಿ, ರಾಯಚೂರು:
ಅತ್ತ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿದ ಕೆಡಿಪಿ ಸಭೆ ನಡೆಯುತ್ತಿದ್ದರೂ ಇತ್ತ ಸಭೆಗೂ ನನಗೂ ಯಾವುದೇ ಸಂಬoಧವಿಲ್ಲ ಎನ್ನುವ ರೀತಿಯಲ್ಲಿ ಮೊಬೈಲ್ ನಲ್ಲಿ ರಮ್ಮಿ ಆಟವಾಡುತ್ತ ಕಾಲ ಕಳೆಯುತ್ತಿದ್ದ ಅರಣ್ಯ ಉಪ ಸಂರಕ್ಷಣಾಧಿಕಾರಿ ಪ್ರವೀಣ್.
ಅಪರೂಪಕ್ಕೊಮ್ಮೆ ನಡೆಯುವ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಕಾಂಗ್ರೆಸ್ಸಿನ ಶಾಸಕರು, ವಿಧಾನಪರಿಷತ್ ಸದಸ್ಯರು ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಸೇರಿದಂತೆ ಇನ್ನು ಅನೇಕ ವಿಷಯಗಳ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಈ ಅಧಿಕಾರಿ ತಾವೊಬ್ಬರೇ ರಮ್ಮಿ ಆಟದಲ್ಲಿ ಮಗ್ನರಾಗಿದ್ದರು. ಅಧಿಕಾರಿ ಆಟವಾಡುವುದು ಕ್ಯಾಮರಾದಲ್ಲಿ ಸೆರೆ ಆಗುತ್ತಿದ್ದಂತೆ ಅಧಿಕಾರಿ ಮುಗುಳುನಗೆ ಬೀರಿ ಆಟವನ್ನು ನಿಲ್ಲಿಸಿದ್ದಾರೆ. ಈ ವಿಷಯ ಹೇಗೋ ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಈ ವಿಷಯವನ್ನು ಜಿಲ್ಲಾಧಿಕಾರಿಗಳು ಸಚಿವರೊಂದಿಗೆ ಚರ್ಚಿಸಿದರು.
ಆಗ ಸಚಿವ ಶರಣಪ್ರಕಾಶ ಪಾಟೀಲರು ಅರಣ್ಯಾಧಿಕಾರಿ ಅವರನ್ನು ಎಬ್ಬಿಸಿ ಏನ್ರೀ ನಿಮಗೆ ಸಭೆಯ ಗಂಭೀರತೆ ಇಲ್ಲವೇನ್ರೀ. ಎಂತಹ ಸಭೆಯಲ್ಲಿ ಏನೂ ಮಾಡಬೇಕೆನ್ನುವುದು ಅರ್ಥವಾಗುವುದಿಲ್ಲವೇ ಎಂದು ಗದರಿದ್ದು, ಅಲ್ಲದೆ ಸಭೆಯಿಂದ ಅವರನ್ನು ಹೊರ ಹೋಗುವಂತೆ ಸೂಚಿಸಿದರು.
ಜೊತೆಗೆ ಅಧಿಕಾರಿಯ ವಿರುದ್ಧ ನೊಟೀಸ್ ಜಾರಿಮಾಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರಲ್ಲದೆ, ಈ ಕುರಿತು ಅವರ ಮೇಲಾಧಿಕಾರಿಗಳಿಗೆ ತಿಳಿಸುವಂತೆಯೂ ಸೂಚಿಸಿದರಲ್ಲದೆ ಇಂತಹ ಘಟನೆಗಳು ಯಾವುದೇ ಸಭೆಗಳನ್ನು ಯಾವುದೇ ಅಧಿಕಾರಿಗಳಿಂದ ಜರುಗಬಾರದು ಎಂದರಲ್ಲದೆ ನಡೆದದ್ದೇ ಆದರೆ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಸಿದರು.