ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯು ಗುರುವಾರ ರಾತ್ರಿಯಿಂದ ಮತ್ತಷ್ಟು ಪ್ರಬಲಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಾದ್ಯಂತ ಅಪಾರ ನಾಶ ನಷ್ಟ ಮುಂದುವರಿದಿದೆ. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಂಗಣಕ್ಕೆ ಮೂರನೇ ಬಾರಿಗೆ ನೀರು ನುಗ್ಗಿದ್ದು, ಇದರಿಂದಾಗಿ ಭಕ್ತಜನರು ಹಾಗೂ ಶ್ರೀ ಕ್ಷೇತ್ರದ ಸಿಬ್ಬಂದಿಗಳು ತೊಂದರೆ ಅನುಭವಿಸಿದರು.
ಬಂಬ್ರಾಣ ಭಾಗದ ಕೆಲವು ಮನೆಗಳಿಗೂ ನೀರು ನುಗ್ಗಿದ್ದು, ಈ ನಿಟ್ಟಿನಲ್ಲಿ ಕುಟುಂಬಗಳಿಗೆ ವಾಸಿಸಲು ಸಾಧ್ಯವಿಲ್ಲದಂತಾಗಿದೆ. ಅಗ್ನಿಶಾಮಕ ದಳದ ರೆಸ್ಕ್ಯೂ ಟೀಮ್ ಆಗಮಿಸಿ ನಾಗರಿಕರ ಸಹಾಯದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿತು. ಈಗಾಗಲೇ 30 ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಧಾರಾಕಾರ ಮಳೆ ಇನ್ನೂ ತೀವ್ರಗೊಂಡಲ್ಲಿ ಬಂಬ್ರಾಣ ಬಯಲು ಪ್ರದೇಶದ ಅನೇಕ ಕುಟುಂಬಗಳು ಸಮಸ್ಯೆ ಎದುರಿಸಬೇಕಾಗಿ ಬರಲಿದೆ.
ಹೊಸಂಗಡಿ – ಆನೆಕಲ್ಲು ರಸ್ತೆಯ ದೈಗೋಳಿ ಸಮೀಪದ ಕೊಡ್ಲಮೊಗರು ಹಾಗೂ ಮಡ್ವ ಎಂಬಲ್ಲಿ ಗುಡ್ಡ ಜರಿದು ಬಿದ್ದು ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದೆ.
ತೃಕ್ಕನ್ನಾಡು ಪ್ರದೇಶದಲ್ಲಿ ಪ್ರಬಲಗೊಂಡ ಕಡಲ್ಕೊರೆತ
ಕಾಸರಗೋಡು ಜಿಲ್ಲೆಯ ಉದುಮ ವಿಧಾನಭಾ ಕ್ಷೇತ್ರ ವ್ಯಾಪ್ತಿಯ ತೃಕ್ಕನ್ನಾಡು ಪ್ರದೇಶದಲ್ಲಿ 30 ಮೀಟರ್‌ನಷ್ಟು ಭೂಮಿಯನ್ನು ಸಮುದ್ರವು ಆಕ್ರಮಿಸಿದೆ. ಕಳೆದ ಕೆಲವು ದಿನಗಳಿಂದ ಸಂಭವಿಸುತ್ತಿರುವ ಕಡಲ್ಕೊರೆತವು ಗುರುವಾರದಿಂದ ಪ್ರಬಲಗೊಂಡಿದ್ದು, ಇದರಿಂದಾಗಿ ಸಮುದ್ರ ಕರಾವಳಿಯ ಭೂಮಿ ಕಡಲಾಕ್ರಮಣಕ್ಕೆ ಒಳಗಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕಾಸರಗೋಡು – ಕಾಞಂಗಾಡು ರಾಜ್ಯ ಹೆದ್ದಾರಿಯು ತೃಕ್ಕನ್ನಾಡು ಭಾಗದಲ್ಲಿ ಅಪಾಯಕಾರಿ ಸನ್ನಿವೇಶ ಎದುರಿಸುತ್ತಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ದಕ್ಷಿಣ ಕಾಶೀ ಎಂದೇ ಪ್ರಸಿದ್ಧವಾದ ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನವಿದೆ. ಈ ದೇವಾಲಯಕ್ಕೂ ಕಡಲಬ್ಬರದ ಆತಂಕ ಎದುರಾಗಿದೆ. ರಾಜ್ಯ ಹೆದ್ದಾರಿಯಲ್ಲಿ ಅಳವಡಿಸಲಾದ ಡಾಮರೀಕರಣದ ತನಕ ಎರಡು ಮೀಟರ್‌ನಷ್ಟು ರಸ್ತೆಯು ಕುಸಿದು ಮಣ್ಣು ಸಹಿತ ಸಮುದ್ರಕ್ಕೆ ಸೇರಿದೆ.
ರಾಜ್ಯ ಹೆದ್ದಾರಿ, ತೃಕ್ಕನ್ನಾಡು ಕ್ಷೇತ್ರ ಹಾಗೂ ಸಮುದ್ರ ನಡುವಿನ ಅಂತರ ಕೇವಲ 35 ಮೀಟರ್ ಅಗಿ ಕಡಿಮೆಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಸಂಭವಿಸಿದ ಕಡಲ್ಕೊರೆತದಿಂದಾಗಿ ಸಮೀಪದಲ್ಲಿದ್ದ ಕೊಡಂಗಲ್ಲೂರಮ್ಮ ಮಂದಿರವು ಅರ್ಧದಷ್ಟು ನೀರು ಪಾಲಾಗಿದೆ. ಇದೇ ಸ್ಥಿತಿಯಲ್ಲಿ ಕಡಲಬ್ಬರ ಮುಂದುವರಿದರೆ ರಾಜ್ಯ ಹೆದ್ದಾರಿ ಕೂಡಾ ಶೀಘ್ರವೇ ಸಮುದ್ರ ಪಾಲಾಗಬಹುದೆಂಬ ಭೀತಿಯಿದೆ.
ಕಾಸರಗೋಡು ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ
ಕಾಸರಗೋಡು ಜಿಲ್ಲೆಯಲ್ಲಿ ಪ್ರಬಲವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳು ಇನ್ನಷ್ಟು ಜಲಾವೃತಗೊಳ್ಳುತ್ತಿವೆ. ಅಲ್ಲದೆ ಪ್ರಮುಖ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜು.19ರಂದು ಕೂಡಾ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಶೇಖರ್ ತಿಳಿಸಿದ್ದಾರೆ.
ಜಿಲ್ಲೆಯ ಶಾಲಾ ಕಾಲೇಜುಗಳು, ವೃತ್ತಿಪರ ವಿದ್ಯಾಸಂಸ್ಥೆಗಳು, ಕೇಂದ್ರೀಯ ವಿದ್ಯಾಲಯಗಳು, ಟ್ಯೂಷನ್ ಸೆಂಟರ್‌ಗಳು, ಮದರಸಾಗಳು, ಅಂಗನವಾಡಿಗಳು ಮತ್ತು ಸ್ಪೆಷಲ್ ಕ್ಲಾಸ್‌ಗಳಿಗೆ ಕೂಡಾ ರಜೆ ಅನ್ವಯಿಸುತ್ತದೆ ಎಂದು ಜಿಲ್ಲಾಽಕಾರಿಯವರ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಈ ಹಿಂದೆ ನಿಗದಿಪಡಿಸಲಾದ ಎಲ್ಲಾ ಪರೀಕ್ಷೆಗಳು ವೇಳಾಪಟ್ಟಿಯಂತೆ ನಡೆಯಲಿವೆ. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಜು.19ರಂದು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿರಲಿದೆ ಎಂದು ತಿರುವನಂತಪುರದ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.