February 6, 2026
Friday, February 6, 2026
spot_img

ಕೇರಳದಲ್ಲಿ ಹೆಚ್ಚುತ್ತಿದೆ ವಿವಾಹ ವಿಚ್ಛೇದನಗಳು: 4 ವರ್ಷಗಳಲ್ಲಿ 1.2 ಲಕ್ಷಕ್ಕೂ ಹೆಚ್ಚು ದಾಂಪತ್ಯದಲ್ಲಿ ಬಿರುಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ರಾಜ್ಯದ ಕುಟುಂಬ ನ್ಯಾಯಾಲಯಗಳಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದ್ದು, ರಾಜ್ಯದಲ್ಲಿ ಪ್ರತಿ ತಿಂಗಳು 2500ಕ್ಕೂ ಮಿಕ್ಕಿ ವಿವಾಹ ವಿಚ್ಚೇದನ ಪ್ರಕರಣ ದಾಖಲಾಗುತ್ತಿರುವುದಾಗಿ ಅಂಕಿ ಅಂಶಗಳು ತಿಳಿಸಿವೆ.

ಪ್ರತಿವರ್ಷ ಮೂವತ್ತು ಸಾವಿರಕ್ಕೂ ಮಿಕ್ಕಿ ವಿವಾಹ ವಿಚ್ಛೇದನ ಪ್ರಕರಣಗಳು ಕುಟುಂಬ ನ್ಯಾಯಾಲಯಗಳ ಮೆಟ್ಟಿಲೇರುತ್ತವೆ. ಇದರಲ್ಲಿ ಬಹುತೇಕ ಪ್ರಕರಣಗಳು ವಿಚ್ಚೇದನ ಪಡೆಯುವಲ್ಲಿ ಯಶಸ್ವಿಯಾಗುತ್ತಿವೆ. ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 1.2 ಲಕ್ಷಕ್ಕೂ ಮಿಕ್ಕಿ ವಿವಾಹ ವಿಚ್ಛೇದನ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಹೆಚ್ಚಿನವು ಕೆಲವೇ ವರ್ಷಗಳ ವೈವಾಹಿಕ ಜೀವನವಾಗಿದೆ. ವಿವಾಹವಾದ ಬಳಿಕ ವಿವಾಹ ವಿಚ್ಛೇದನದ ಕುರಿತು ಚಿಂತಿಸುವ ಪ್ರವೃತ್ತಿ ಹೊಸ ತಲೆಮಾರಿನಲ್ಲಿ ಹೆಚ್ಚುತ್ರಿರುವುದಾಗಿ ಸಂಬಂಧಪಟ್ಟ ಕೌನ್ಸಿಲರ್‌ಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ ಪ್ರತಿ ವರ್ಷ ಸರಾಸರಿ 1.10 ಲಕ್ಷ ವಿವಾಹಗಳು ಕೇರಳದಲ್ಲಿ ನಡೆಯುತ್ತವೆ. ಶೇಕಡಾ 25ರಷ್ಟು ವೈವಾಹಿಕ ಸಂಬಂಧಗಳು ವಿಚ್ಚೇದನದಲ್ಲಿ ಅಂತ್ಯಗೊಳ್ಳುತ್ತಿವೆ.

2020ರಲ್ಲಿ 20 ಸಾವಿರಕ್ಕಿಂತ ಕಡಿಮೆ ಇದ್ದ ವಿವಾಹ ವಿಚ್ಚೇದನ ಪ್ರಕರಣಗಳು 2022ರಲ್ಲಿ 25 ಸಾವಿರಕ್ಕೆ ತಲುಪಿತು. 2022ರಿಂದ 2025ರ ವರೆಗಿನ ಪ್ರತಿ ವರ್ಷಗಳಲ್ಲಿ ಇದು 30 ಸಾವಿರಕ್ಕಿಂತಲೂ ಮೇಲೇರಿದೆ. ಸಂಬಂಧಗಳ ಪಾವಿತ್ರ್ಯವನ್ನು ಮನವರಿಕೆ ಮಾಡಿಕೊಂಡು ಪರಸ್ಪರ ಹೊಂದಿಕೊಂಡು, ಅರ್ಥಮಾಡಿಕೊಂಡು ಬದುಕುವ ಕಾಲದಿಂದ ವಿಭಿನ್ನವಾಗಿ ಸಾಮಾಜಿಕ ಜಾಲತಾಣದ ಯುಗಕ್ಕೆ ತಲುಪಿದಾಗ ಈ ಬದಲಾವಣೆ ಪ್ರಕಟಗೊಂಡಿದೆ.

ರೀಲ್‌ಗಳ ಜಗತ್ತಿನಲ್ಲಿ ರಿಯಲ್ ಬದುಕನ್ನು ಅನುಭವಿಸಲು ಸಾಧ್ಯವಾಗದಿರುವುದು ಸಂಬಂಧಗಳಲ್ಲಿ ಬಿರುಕು ಮೂಡಲು ಕಾರಣವಾಗುತ್ತಿದೆ. ದಂಪತಿಗಳಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದಿರುವುದು ವೈಮನಸ್ಸಿಗೆ, ಆಕ್ರಮಣಕ್ಕೆ ದಾರಿಯಾಗುತ್ತಿದೆ.

ರಾಜ್ಯದಲ್ಲಿ 28 ಕುಟುಂಬ ನ್ಯಾಯಾಲಯಗಳಿವೆ. ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳ ಪರಿಗಣಿಸಿಕೊಂಡು ತಿರುವನಂತಪುರ, ಎರ್ನಾಕುಳಂ ಜಿಲ್ಲೆಯಲ್ಲಿ ನಾಲ್ಕು ಕುಟುಂಬ ನ್ಯಾಯಾಲಯಗಳಿವೆ. ಕಾಸರಗೋಡು ಜಿಲ್ಲೆಯಲ್ಲಿ ಒಂದು ಕುಟುಂಬ ನ್ಯಾಯಾಲಯ ಇರುವುದಾಗಿದೆ. ಕುಟುಂಬ ನ್ಯಾಯಾಲಯಗಳು ಕಡಿಮೆಯಾಗಿರುವುದರಿಂದ ಕೆಲವು ಜಿಲ್ಲೆಗಳಲ್ಲಿ ಹೆಚ್ಚುವರಿ ಕುಟುಂಬ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ.

ಜಾಲತಾಣಗಳ ಪ್ರಭಾವ?
ವೈವಾಹಿಕ ಸಂಬಂಧಗಳಲ್ಲಿ ಬಿರುಕು ಮೂಡಲು ಕಾರಣ ಸಾಮಾಜಿಕ ಜಾಲತಾಣ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚಿದ ಮೊಬೈಲ್ ಬಳಕೆಯ ಬಳಿಕ ವರ್ಷಗಳಲ್ಲಿ ಸಂಬಂಧಗಳಲ್ಲಿ ಹೆಚ್ಚು ಬಿರುಕು ಕಾಣಿಸಲು ಕಾರಣವಾಗಿದೆ. ಪ್ರಸ್ತುತ ವ್ಲೋಗರ್‌ಗಳು, ರೀಲ್ಸ್‌ಗಳು ಹೆಚ್ಚಿರುವುದು, ಮಹಿಳೆಯರು ಸಾಮಾಜಿಕ ಜಾಲತಾಣಗಳನ್ನು ಆಶ್ರಯಿಸುವುದನ್ನು ಹೆಚ್ಚಿಸಿದೆ. ಲೈಕ್, ಕಮೆಂಟ್, ರೀಚ್ ಲಭಿಸುವುದಕ್ಕಾಗಿ ಶರೀರ ಪ್ರದರ್ಶಿಸುವ ಮಹಿಳೆಯರೂ ಸಾಮಾಜಿಕ ಜಾಲತಾಣಗಳಲ್ಲಿ ಇದ್ದಾರೆ. ಖಾಸಗಿ ಬದುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ವರ್ಣಿಸುವಾಗ ಅದು ಕೌಟುಂಬಿಕ ವಾತಾವರಣದಲ್ಲಿ ಉಂಟುಮಾಡುವ ಪರಿಣಾಮವು ದಾಂಪತ್ಯ ಜೀವನದ ಬಿರುಕಿಗೆ ಕಾರಣವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !