ಹೊಸದಿಗಂತ ಚಿತ್ರದುರ್ಗ:
ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಯಿಂದ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಕೇಂದ್ರದ ಯೋಜನೆಯಿಂದ ಸಾಮಾನ್ಯ ಜನರು ಬದುಕುತ್ತಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ 11ವರ್ಷದ ಸಾಧನೆ ಪಟ್ಟಿ ಕೊಡಲಿ. ನಾವು ನಮ್ಮ ಸರ್ಕಾರದ ಸಾಧನೆಯ ಪಟ್ಟಿ ಕೊಡುತ್ತೇವೆ. ಕಪ್ಪು ಹಣ ತರುತ್ತೇವೆ ಎಂದರು. ಎಲ್ಲಿದೆ ಕಪ್ಪು ಹಣ? 15ಲಕ್ಷ ಯಾರ ಅಕೌಂಟಿಗೆ ಹಾಕಿದ್ದಾರೆ? ಶೋಭಾ ಕರಂದ್ಲಾಜೆ ಅಕೌಂಟಿಗೆ 15ಲಕ್ಷ ಹಣ ಬಂದಿದೆಯಾ? ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದ್ದರೂ ಪರರ ತಟ್ಟೆಯ ನೊಣ ನೋಡುವುದು ಸರಿಯಲ್ಲ ಎಂದರು.
ಕಾಂಗ್ರೇಸಿಗರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದು ಬಿಜೆಪಿಗರು, ನಾವಲ್ಲ. ಪಕ್ಷದ ಆಂತರಿಕ ವಿಚಾರ ಬಗ್ಗೆ ಸುರ್ಜೆವಾಲ ಚರ್ಚಿಸಿದ್ದಾರೆ. ಸುರ್ಜೆವಾಲ ಸರ್ಕಾರದ ವಿಚಾರ ಚರ್ಚಿಸಲು ಬಂದಿಲ್ಲ. ಶಾಸಕರು, ಸಂಘಟನೆ ವಿಚಾರ ಚರ್ಚೆಗೆ ಬಂದಿದ್ದಾರೆ. ಸಣ್ಣಪುಟ್ಟ ತಪ್ಪು ಮಾಡಿದ್ದರೆ ಸರಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಸುರ್ಜೆವಾಲ ಬಿಜೆಪಿಯವರ ಜೊತೆ ಚರ್ಚೆ ಮಾಡಬೇಕಾ? ಬಿಜೆಪಿಯವರಿಗೆ ಹೋಗಿ ಸುರ್ಜೆವಾಲ ಬುದ್ದಿ ಹೇಳಬೇಕಾ? ಎಂದರು.
ಬಿಜೆಪಿಯಲ್ಲಿರುವ ಎರಡು ಗುಂಪುಗಳ ಬಗ್ಗೆ ಶೋಭಾ ಕರಂದ್ಲಾಜೆ ಮಾತನಾಡಲಿ. ಇನ್ನು ಮೂರನೇ ಗುಂಪು ಕೇಂದ್ರದಲ್ಲಿ ಕುಳಿತಿದೆ. ಬಿಜೆಪಿ ಮನೆ ಒಂದು, ಹದಿನಾರು ಬಾಗಿಲು ಆಗಿದೆ ಎಂದ ಅವರು, ಜುಲೈ ೩೦ಕ್ಕೆ ಶಾಸಕರ ಸಭೆಯಿದೆ. ತಲಾ ೫೦ ಕೋಟಿ ಅನುದಾನ ಕೊಡುತ್ತಾರೆ. ನಾವೆಲ್ಲಾ ಒಂದಾಗಿದ್ದೇವೆ. ಅಸಮಾಧಾನ ಶಮನಕ್ಕಾಗಿ ಅನುದಾನ ಕೊಡುತ್ತಾರೆ ಎಂಬುದೇನಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೇಸ್ ದಲಿತರಿಗೆ ಸಿಎಂ ಮಾಡಲಿ ಎಂಬ ಬಿಜೆಪಿ ಪಕ್ಷದವರ ಹೇಳಿಕೆಗೆ ಉತ್ತರಿಸಿದ ಅವರು, ಬಿಜೆಪಿ ದಲಿತರಿಗೆ ಪ್ರಧಾನಮಂತ್ರಿ ಮಾಡಲಿ. ಯಾವ ದಲಿತರಿಗೆ ಬಿಜೆಪಿ ಮುಖ್ಯ ಹುದ್ದೆ ನೀಡಿದೆ. ನಾವು ಹಿಂದೆ ಬೇರೆ ಬೇರೆ ಸಮುದಾಯದವರನ್ನು ರಾಷ್ಟ್ರಪತಿ ಮಾಡಿದ್ದೇವೆ. ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಬಂಗಾರು ಲಕ್ಷ್ಮಣ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ ಏನು ಮಾಡಿದರು? ಕಾಲ ಬಂದಾಗ ದಲಿತ ಸಿಎಂ, ದಲಿತ ಪಿಎಂ ಆಗುತ್ತಾರೆ. ಕಾಂಗ್ರೆಸ್ ಪಕ್ಷದಿಂದ ಆಗುತ್ತಾರೆ, ಬೇರೆ ಪಕ್ಷದಿಂದ ಆಗಲ್ಲ ಎಂದರು.