ರಾಜಕಾರಣಿಗಳ ಜೊತೆ ಚಂಗೂರ್ ಬಾಬಾನಿಗೆ ಲಿಂಕ್?: ‘ರೆಡ್ ಡೈರಿ’ಯಲ್ಲಿ ರಹಸ್ಯ ಮಾಹಿತಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಧರ್ಮ ಮತಾಂತರ ಚಂಗೂರ್ ಬಾಬಾ ಅಲಿಯಾಸ್ ಜಮಾಲುದ್ದೀನ್ 106 ಕೋಟಿ ರೂ. ವಿದೇಶಿ ನಿಧಿಯನ್ನು ಹೊಂದಿದ್ದಾರೆಂದು ಬಹಿರಂಗವಾದ ಕೆಲವೇ ದಿನಗಳಲ್ಲಿ ಇದೀಗ ಸ್ಪೋಟಕ ಮತ್ತಷ್ಟು ವಿಚಾರಗಳು ಹೊರಬರುತ್ತಿದೆ.

ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ ದಾಳಿಯ ಸಮಯದಲ್ಲಿ ವಶಪಡಿಸಿಕೊಂಡ ದಾಖಲೆಯಲ್ಲಿ 2022ರ ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಚಂಗೂರ್ ಬಾಬಾ ಅವರಿಂದ ಹಣಕಾಸಿನ ಬೆಂಬಲ ಪಡೆದಿದ್ದಾರೆ ಎಂದು ಹೇಳಲಾದ ಹಲವಾರು ರಾಜಕಾರಣಿಗಳು ಮತ್ತು ಮಾಜಿ ಅಧಿಕಾರಿಗಳ ಹೆಸರುಗಳಿವೆ ಎಂದು ಹೇಳಲಾಗುತ್ತಿರುವ ‘ರೆಡ್ ಡೈರಿ’ ಪತ್ತೆಯಾಗಿದೆ.

ಎಟಿಎಸ್, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಬಹು ಸಂಸ್ಥೆಗಳು ಈಗ ಈ ಡೈರಿಯ ಮೇಲೆ ಕೇಂದ್ರೀಕರಿಸಿವೆ. ಇದು ಚಂಗೂರ್ ಬಾಬಾ ಅವರ ವಿಸ್ತಾರವಾದ 106 ಕೋಟಿ ರೂಪಾಯಿ ವಿದೇಶಿ ಅನುದಾನಿತ ಸಾಮ್ರಾಜ್ಯದ ಬಗ್ಗೆ ಮಹತ್ವದ ಸಾಕ್ಷಿಗಳನ್ನು ನೀಡುವ ಸಾಧ್ಯತೆಯಿದೆ.

ಚಂಗೂರ್ ಬಾಬಾ ನೇಪಾಳದ ಗಡಿಯಲ್ಲಿರುವ ಜಿಲ್ಲೆಯ ಬಲರಾಂಪುರ್‌ನ ರೆಹ್ರಾ ಮಾಫಿ ಗ್ರಾಮದ ನಿವಾಸಿ. ಅವರು ಸೈಕಲ್‌ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಒಂದು ದಶಕದ ಅವಧಿಯಲ್ಲಿ, ಅವರು ಬಹುಕೋಟಿ ಬ್ಯುಸಿನೆಸ್ ಅನ್ನೇ ನಿರ್ಮಿಸಿದರು. ಅಧಿಕೃತ ಅಂದಾಜಿನ ಪ್ರಕಾರ, ಅವರು 40ಕ್ಕೂ ಹೆಚ್ಚು ಸಕ್ರಿಯ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಅವುಗಳ ಮೂಲಕ ಸುಮಾರು 106 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿತ್ತು. ಬಲರಾಂಪುರದಲ್ಲಿ ಒಂದು ಮತ್ತು ಮಹಾರಾಷ್ಟ್ರದ ಲೋನಾವಾಲದಲ್ಲಿ ಇನ್ನೊಂದು ಆಸ್ತಿಯ ಮೌಲ್ಯ 18 ಕೋಟಿ ರೂ.ಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಆಗಸ್ಟ್ 2023ರಲ್ಲಿ ಖರೀದಿಸಿದ ಲೋನಾವಾಲದಲ್ಲಿರುವ ಆಸ್ತಿಯನ್ನು ಅವರ ಮತ್ತು ಅವರ ಸಹಚರರ ಹೆಸರಿನಲ್ಲಿ ಜಂಟಿಯಾಗಿ ನೋಂದಾಯಿಸಲಾಗಿದೆ.

ಉತ್ತರ ಪ್ರದೇಶ ಮತ್ತು ಮುಂಬೈನಾದ್ಯಂತ 14 ಸ್ಥಳಗಳಲ್ಲಿ ವ್ಯಾಪಕ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ED) ಚಂಗೂರ್ ಬಾಬಾ ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಸಂಭಾವ್ಯ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಪತ್ತೆಹಚ್ಚಿದೆ.

ಆರೋಪಿ ನವೀನ್ ಅವರ ನಿಕಟವರ್ತಿ ಶೆಹಜಾದ್ ಶೇಖ್ ಅವರ ಮುಂಬೈ ನಿವಾಸದಲ್ಲಿ ಸಿಕ್ಕ ಮೊಬೈಲ್ ಫೋನ್‌ನಲ್ಲಿ ಕ್ರೊಯೇಷಿಯಾದ ಕರೆನ್ಸಿ ‘ಕುನಾ’ದ ಫೋಟೋ ಕಂಡುಬಂದಿದೆ. ಧಾರ್ಮಿಕ ಮತಾಂತರ ದಂಧೆಯು ಅಂತಾರಾಷ್ಟ್ರೀಯ ಆಯಾಮಗಳನ್ನು ಹೊಂದಿರಬಹುದು, ವಿದೇಶಿ ಕರೆನ್ಸಿ ಕಾರ್ಯಾಚರಣೆಗಳಲ್ಲಿ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ಈ ಸಂಶೋಧನೆಯು ಸೂಚಿಸುತ್ತದೆ. ಈ ಅಂಶದ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಇಡಿ ಈಗ ಶೆಹಜಾದ್ ಶೇಖ್ ಅವರ ಮೊಬೈಲ್​ನಿಂದ ಡೇಟಾವನ್ನು ವಿಶ್ಲೇಷಿಸುತ್ತಿದೆ.ಈ ತನಿಖೆಯ ಸಮಯದಲ್ಲಿ, ಶೆಹಜಾದ್ ಶೇಖ್ ಚಂಗೂರ್ ಬಾಬಾಗೆ ಕೆಲವು ಭೂಮಿಯನ್ನು ಮಾರಾಟ ಮಾಡಿದ್ದಾನೆ ಎಂದು ಕಂಡುಬಂದಿದೆ. ಚಂಗೂರ್ ಬಾಬಾ ಮತ್ತು ಅವರ ಆಪ್ತ ಸಹಚರರ ಒಡೆತನದ 10 ಆಸ್ತಿಗಳನ್ನು ಇಡಿ ವಶಪಡಿಸಿಕೊಳ್ಳಲಿದೆ.

ದೊಡ್ಡ ಪ್ರಮಾಣದ ಧಾರ್ಮಿಕ ಮತಾಂತರಗಳನ್ನು ಸಂಘಟಿಸಿದ ಆರೋಪದ ಮೇಲೆ ಚಂಗೂರ್ ಬಾಬಾ ಅವರನ್ನು ಈ ತಿಂಗಳ ಆರಂಭದಲ್ಲಿ ಬಂಧಿಸಲಾಯಿತು. ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆಯಲ್ಲಿ ಭಾಗಿಯಾಗಿದ್ದು, ದುರ್ಬಲ ವ್ಯಕ್ತಿಗಳನ್ನು, ವಿಶೇಷವಾಗಿ ಹಿಂದೂ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರನ್ನು ಗುರಿಯಾಗಿಸಿಕೊಂಡು ಮತಾಂತರದ ಜಾಲವನ್ನು ಹೆಣೆಯಲಾಗಿತ್ತು ಎಂದು ಮಾಹಿತಿ ಬಹಿರಂಗಪಡಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!