ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳ ಕೊಲ್ಲಿಯ ಅಂತಾರಾಷ್ಟ್ರೀಯ ಸಮುದ್ರ ಗಡಿ ಮೀರಿ ಬಾಂಗ್ಲಾದೇಶದ ನೀರಿಗೆ ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ 34 ಭಾರತೀಯ ಮೀನುಗಾರರನ್ನು ಬಾಂಗ್ಲಾದೇಶದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಘಟನೆ ಜುಲೈ 14 ಮತ್ತು 15ರ ಮಧ್ಯರಾತ್ರಿ ನಡೆದಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಬಾಂಗ್ಲಾದೇಶದ ಮೊಂಗ್ಲಾ ಸಮೀಪದಲ್ಲಿ ಈ ಮೀನುಗಾರರನ್ನು ಬಂಧಿಸಲಾಗಿದೆ. ಅವರ ಎರಡು ದೋಣಿಗಳು, ಎಫ್‌ಬಿ ಜೋರ್ ಮತ್ತು ಎಫ್‌ಬಿ ಮಮ್ಗಲ್ ಚಾಂಡಿಅನ್ನು ಸಹ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಭಾರತೀಯ ಮೀನುಗಾರರು ಅಂತಾರಾಷ್ಟ್ರೀಯ ಗಡಿ ದಾಟಿ ಬಾಂಗ್ಲಾದೇಶದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿಡ್ಡರು ಎನ್ನಲಾಗಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ, ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಬಾಂಗ್ಲಾ ಅಧಿಕಾರಿಗಳೊಂದಿಗೆ ರಾಜತಾಂತ್ರಿಕ ಚರ್ಚೆ ಆರಂಭಿಸಿದ್ದು, ಬಂಧಿತ ಮೀನುಗಾರರಿಗೆ ತಕ್ಷಣದ ಕಾನ್ಸುಲರ್ ಸಹಾಯ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಬಿಕ್ಕಟ್ಟಿನ ಸಂಬಂಧದ ಸಮಯದಲ್ಲಿ ಸಂಭವಿಸಿದ್ದು, ಕಳೆದ ವರ್ಷ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ನಂತರ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವುದಾಗಿ ತಿಳಿದುಬಂದಿದೆ.