ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಹಲವಾರು ಬೇಕರಿ, ಕಾಂಡಿಮೆಂಟ್ಸ್ ಮತ್ತು ಟೀ ಅಂಗಡಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ (Commercial Tax Department) ತೆರಿಗೆ ನೋಟಿಸ್ ನೀಡಿದ್ದು, ಇದರಿಂದ ವ್ಯಾಪಾರಿಗಳು ಭಾರೀ ಅಸಮಾಧಾನಗೊಂಡಿದ್ದಾರೆ. ಸರಳ ವ್ಯಾಪಾರದ ಮೇಲೆ ಲಕ್ಷಾಂತರ ರೂಪಾಯಿ ತೆರಿಗೆ ಹಾಕಲಾಗಿದೆ ಎಂಬ ಆಕ್ರೋಶ ಹೊರಹಾಕಿರುವ ವ್ಯಾಪಾರಿಗಳು, ಸರ್ಕಾರ ತೆರಿಗೆ ಮನ್ನಾ ಮಾಡದಿದ್ದರೆ ಜುಲೈ 25ರಂದು ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದ್ದಾರೆ.
UPI ವಹಿವಾಟಿಗೆ ಆಧಾರಿತ ತೆರಿಗೆ ಲೆಕ್ಕಾಚಾರ
ಫೋನ್ ಪೇ, ಗೂಗಲ್ ಪೇ, ಯುಪಿಐ (UPI) ಮೂಲಕ ಕಳೆದ ಮೂರು ವರ್ಷಗಳಲ್ಲಿ ಬಂದ ಲೆಕ್ಕಗಳನ್ನು ಆಧಾರ ಮಾಡಿಕೊಂಡು, ಹಲವಾರು ಅಂಗಡಿಗಳಿಗೆ 30 ಲಕ್ಷ, 60 ಲಕ್ಷ, ಕೆಲವರಿಗೆ 1 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಪಾವತಿಸಬೇಕೆಂದು ನೋಟಿಸ್ ನೀಡಲಾಗಿದೆ. ಇದರಿಂದ ಶಾಕ್ ಆದ ವ್ಯಾಪಾರಿಗಳು ‘ಇಷ್ಟು ಹಣ ಎಲ್ಲಿ ಇತ್ತು ನಾವು ನೋಡಲೇ ಇಲ್ಲ’ ಎಂದು ತಲೆ ಹಿಡಿದುಕೊಂಡಿದ್ದಾರೆ.
ಹಾಲು, ಬ್ರೆಡ್ ಬನ್, ಸಿಗರೇಟ್‌ಗೆ ಟ್ಯಾಕ್ಸ್:
ಕೇವಲ ಟೀ ಶಾಪ್ ಅಲ್ಲ, ಹಾಲು, ಬ್ರೆಡ್ ಬನ್, ಸಿಗರೇಟ್ ಮಾರಾಟಕ್ಕೂ ತೆರಿಗೆ ವಿಧಿಸಿರುವುದು ವ್ಯಾಪಾರಿಗಳಿಗೆ ಆಘಾತವಾಗಿದೆ. ಹೂವಿನ ವ್ಯಾಪಾರಿಗಳು ಮತ್ತು ಹಾಲಿನ ಬೂತ್ ಹೊಂದಿರುವವರಿಗೆ ಕೂಡ ನೋಟಿಸ್ ನೀಡಲಾಗಿದೆ.
ಜುಲೈ 21ರೊಳಗೆ ತೆರಿಗೆ ಪಾವತಿಸದಿದ್ದರೆ ಖಾತೆಗಳನ್ನು ಸೀಜ್ ಮಾಡಲಾಗುತ್ತದೆ ಎಂಬ ಎಚ್ಚರಿಕೆಯ ನೋಟಿಸ್ ಕೂಡಾ ನೀಡಲಾಗಿದೆ. ಇದರಿಂದಾಗಿ ಅಂಗಡಿ ಮಾಲೀಕರು ಕೋಪಗೊಂಡಿದ್ದು. ಸರ್ಕಾರ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜುಲೈ 25ರಂದು ಬಂದ್: ಮೂರು ದಿನ ವ್ಯಾಪಾರ ಸ್ಥಗಿತ
ವ್ಯಾಪಾರಿಗಳು ಜುಲೈ 23, 24, 25 ರಂದು ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಲು ನಿರ್ಧಾರ ಮಾಡಿದ್ದಾರೆ. ಜುಲೈ 25 ರಂದು ರಾಜ್ಯಾದ್ಯಂತ ಎಲ್ಲಾ ಟೀ ಅಂಗಡಿ, ಬೇಕರಿ, ಕಾಂಡಿಮೆಂಟ್ಸ್ ಅಂಗಡಿಗಳು ಬಂದ್ ಆಗಲಿದ್ದು, ಕೆಲವು ತರಕಾರಿ ಅಂಗಡಿಗಳು ಕೂಡ ಈ ಬಂದ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ.