ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯೊಂದು ಧಗಧಗಿಸಿ ಉರಿದು, ಮಲಗಿದ್ದ ಯುವಕ ಸಜೀವ ದಹನವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕನ್ನಮಂಗಲದಲ್ಲಿ ನಡೆದಿದೆ.
ಉದಯ್ ಮೃತ ದುರ್ದೈವಿ. ಶುಕ್ರವಾರ ಸಂಜೆ ಉದಯ್ ಕೆಲಸ ಮುಗಿಸಿಕೊಂಡು, ಕುಡಿದು ಮನೆಗೆ ಬಂದಿದ್ದಾನೆ. ಎಣ್ಣೆ ನಶೆಯಲ್ಲಿ ಕೋಣೆಯೊಳಗೆ ಮಲಗಿ ಸಿಗರೇಟ್ ಹಚ್ಚಿ ಸೇದಿದ್ದಾನೆ. ಕೊನೆಗೆ ಕಿಡಿಯನ್ನು ಆರಿಸದೆ ನಶೆಯಲ್ಲಿ ಹಾಗೆ ನಿದ್ದೆಗೆ ಜಾರಿದ್ದಾನೆ. ಸಿಗರೇಟ್ ಕಿಡಿ ಕೋಣೆಯಲ್ಲಿನ ಬಟ್ಟೆಗಳಿಗೆ ತಗುಲಿದ್ದು, ಬೆಂಕಿ ಹೊತ್ತಿಕೊಂಡಿದೆ. ಕ್ಷಣ ಮಾತ್ರದಲ್ಲಿ ಮನೆಯ ತುಂಬ ಬೆಂಕಿ ಆವರಿಸಿದೆ.
ದಟ್ಟ ಹೊಗೆ ಹಾಗೂ ಬೆಂಕಿಯ ಕಿಡಿ ಕಂಡ ಅಕ್ಕ ಪಕ್ಕದವರು ಮನೆ ಬಳಿ ಬಂದು ನೋಡಿದಾಗ ಮನೆ ಹೊತ್ತಿ ಉರಿಯುತ್ತಿತ್ತು. ಕೂಡಲೇ ಸ್ಥಳಿಯರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೆ ನಶೆಯಲ್ಲಿ ನಿದ್ದೆಗೆ ಜಾರಿದ್ದ ಉದಯ್ ಸುಟ್ಟು ಕರಕಲಾಗಿದ್ದನು. ಮಗನ ಸಾವು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ಸಂಬಂಧ ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.